ಬೆಂಗಳೂರು:ತಮ್ಮ ಆಪ್ತ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅವರ ಪತ್ನಿ ಮಾಲಾ ನಾರಾಯಣರಾವ್ ಅವರನ್ನೇ ಕಣಕ್ಕಿಳಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಿಡಿದ ಹಠವೇ ಕಾಂಗ್ರೆಸ್ ಸೋಲಿಗೆ ಕಾರಣವಾಯಿತೇ?. ಚುನಾವಣೆ ಸೋಲಿನ ಬಳಿಕ ಈ ಪ್ರಶ್ನೆ ಉದ್ಭವಿಸಿದೆ.
ಬೀದರ್ ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ನಾಯಕರಿಗೂ ಮಾಲಾ ನಾರಾಯಣರಾವ್ ಅವರನ್ನು ಕಣಕ್ಕಿಳಿಸಲು ಮನಸ್ಸಿರಲಿಲ್ಲ. ಸಿದ್ದರಾಮಯ್ಯ ಒತ್ತಡದ ಮತ್ತು ಅನಿವಾರ್ಯವಾಗಿ ರಾಜ್ಯ ನಾಯಕರು ಕ್ಷೇತ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೆಲವರು ಪ್ರಚಾರದಲ್ಲಿ ನೆಪಮಾತ್ರಕ್ಕೆ ಭಾಗವಹಿಸಿದ್ದರು ಎಂಬ ದೂರು ಇದೀಗ ಕೇಳಿ ಬರುತ್ತಿದೆ.
ಅಲ್ಲದೇ ನಾರಾಯಣರಾವ್ ಕುಟುಂಬಕ್ಕೆ ಚುನಾವಣೆ ಎದುರಿಸಲು ಅಗತ್ಯ ಆರ್ಥಿಕ ಸಾಮರ್ಥ್ಯ ಅಥವಾ ಸಾವಿಗೆ ಮುನ್ನ ನಾರಾಯಣರಾವ್ ತಮ್ಮ ವೈಯಕ್ತಿಕ ವರ್ಚಸ್ಸನ್ನು ಕೂಡ ದೊಡ್ಡ ಮಟ್ಟದಲ್ಲಿ ಬೆಳೆಸಿಕೊಂಡಿರಲಿಲ್ಲ. ಪಕ್ಷ ಕಟ್ಟಲು 40 ವರ್ಷದಿಂದ ಶ್ರಮಿಸಿದ್ದ ಅವರು, 2018ರಲ್ಲಿ ಆಯ್ಕೆಯಾದ ಸಂದರ್ಭದಿಂದಲೂ ಹೆಚ್ಚಿನ ಸಮಯ ಅನಾರೋಗ್ಯ ಹಿನ್ನೆಲೆಯಲ್ಲಿ ಕ್ಷೇತ್ರದ ಜನರ ಬಳಿ ತೆರಳಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರನ್ನು ಕಣಕ್ಕಿಳಿಸಿ, ಅವರನ್ನಾದರೂ ಗೆಲ್ಲಿಸಬಹುದಿತ್ತು ಅನ್ನೋದು ಕ್ಷೇತ್ರದಲ್ಲಿ ಕೇಳಿ ಬರುವ ಅಭಿಪ್ರಾಯ.
ನಾರಾಯಣ ರಾವ್ ಒಬ್ಬ ಜನಪ್ರಿಯ ರಾಜಕಾರಣಿಯಾಗಿದ್ದರೂ ಅವರ ಕುಟುಂಬ ಸದಸ್ಯರನ್ನು ಅಷ್ಟಾಗಿ ರಾಜಕೀಯ ರಂಗಕ್ಕೆ ಪರಿಚಯಿಸಿರಲಿಲ್ಲ. ಕನಿಷ್ಠ ಅವರ ಪತ್ನಿ ಬದಲು ಪುತ್ರ ಗೌತಮ್ ಕಣಕ್ಕಿಳಿದಿದ್ದರೂ, ಪೈಪೋಟಿ ನೀಡಬಹುದಾಗಿತ್ತು ಎಂಬ ಮಾತಿದೆ.
ಬೀದರ್ ಜಿಲ್ಲೆಯ ಸ್ಥಿತಿವಂತ ನಾಯಕರಾದ ಪರಿಷತ್ ಸದಸ್ಯ ವಿಜಯ್ ಸಿಂಗ್ (ಮಾಜಿ ಸಿಎಂ ಎನ್. ಧರ್ಮಸಿಂಗ್ ಪುತ್ರ) ಹಾಗೂ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ (ಮಾಜಿ ಸಚಿವ ರಾಜಶೇಖರ್ ಪಾಟೀಲ್ ) ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಸಿದ್ದರಾಮಯ್ಯ ಹಠಕ್ಕೆ ಬಿದ್ದು, ಮಾಲಾ ಅವರಿಗೆ ಟಿಕೆಟ್ ಕೊಡಿಸಿದರು. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರಿಗೆ ಬೇಸರ ತರಿಸಿದೆ ಎನ್ನಲಾಗಿತ್ತು.
ಇದಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಜಿಲ್ಲೆಯ ಪ್ರಮುಖ ನಾಯಕ ಈಶ್ವರ್ ಖಂಡ್ರೆ ಸಹ ನಾರಾಯಣ ರಾವ್ ಕುಟುಂಬಕ್ಕೆ ಆಪ್ತರಾಗಿದ್ದು, ಅವರ ಗೆಲುವಿನ ಅವಕಾಶ ಕಡಿಮೆ. ಬೇರೆ ಸಮರ್ಥ ಅಭ್ಯರ್ಥಿ ಸಿಕ್ಕರೆ ಕಣಕ್ಕಿಳಿಸುವುದು ಉತ್ತಮ. ಬಿಜೆಪಿ ಸರ್ಕಾರ ಗೆಲುವಿಗೆ ಪ್ರಯತ್ನ ನಡೆಸಲಿದೆ. ಅಲ್ಲದೇ ಶರಣು ಸಲಗಾರ ಅಭ್ಯರ್ಥಿ ಆಗಿ ಆಯ್ಕೆಯಾದ ಸಂದರ್ಭದಲ್ಲೂ ಅವರ ಜನಪ್ರಿಯತೆಯ ಸ್ಥಳೀಯ ನಾಯಕರು ಅಭ್ಯರ್ಥಿ ಬದಲಿಸುವಂತೆ ರಾಜ್ಯ ನಾಯಕರಿಗೆ ಮನವಿ ಮಾಡಿದ್ದರು.
ಬಸವಕಲ್ಯಾಣದಲ್ಲಿ ಅಭ್ಯರ್ಥಿ ದುರ್ಬಲರಲ್ಲ. ಆಡಳಿತ ಪಕ್ಷಕ್ಕೆ ಅನುಕೂಲ ಹೆಚ್ಚು. ಅಭ್ಯರ್ಥಿಗೆ ಹಣಕಾಸಿನ ತೊಂದರೆ ಇತ್ತು. ನಮ್ಮ ನಾಯಕರು ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಜೆಡಿಎಸ್ ಅಭ್ಯರ್ಥಿಯಿಂದ ನಮಗೆ ಹಿನ್ನಡೆಯಾಯಿತು ಎಂದು ಸೋಲಿನ ಬಳಿಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಎಲ್ಲಿ ಎಡವಿದೆ, ನಮಗೆ ಏಕೆ ಹಿನ್ನಡೆಯಾಗಿದೆ ಎಂದು ತಿಳಿಯಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ನಾನೂ ಸೇರಿದಂತೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ನಮ್ಮಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಎಲ್ಲಾ ನಾಯಕರ ಅಭಿಪ್ರಾಯ ಅತ್ಯಂತ ಮುಖ್ಯ. ಏಕಾಂಗಿಯಾಗಿ ನಿರ್ಧಾರ ಕೈಗೊಂಡು ಎಡವಿದ್ದೇನೆ ಎಂಬ ಅರ್ಥವನ್ನು ಅವರ ಮಾತು ಸೂಚಿಸುತ್ತಿತ್ತು. ಸಿದ್ದರಾಮಯ್ಯ ಹಠ ಗೆಲ್ಲಬಹುದಾಗಿದ್ದ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದ ಸೋಲನ್ನು ತಂದಿಡುವಂತೆ ಮಾಡಿದೆ.