ಬೆಂಗಳೂರು : ನಗರದ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭವಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂಪುಟ ಸದಸ್ಯರು ಶಾಸಕರು ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಮೇಲೆ ಚರ್ಚೆ ನಡೆಯಲಿದ್ದು, ಶಾಸಕರಿಂದ ವಿಶೇಷ ಮಾಹಿತಿ ಸಲಹೆ ಹಾಗೂ ಸೂಚನೆಯನ್ನು ಸಿಎಂ ಪಡೆಯಲಿದ್ದಾರೆ.
ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಚಿವ ಸಂಪುಟ ಸಭೆ ಮುಗಿಸಿ ಕಾಂಗ್ರೆಸ್ ನಾಯಕರು ಶಾಸಕಾಂಗ ಸಭೆಗೆ ಆಗಮಿಸಿದ್ದು, ಈಗಾಗಲೇ ಜಾರಿಗೆ ಬಂದಿರುವ ವಿವಿಧ ಭಾಗ್ಯ ಯೋಜನೆಗಳ ಸಾಧಕ ಬಾದಕ ಹಾಗೂ ಜನರಿಂದ ಬರುತ್ತಿರುವ ಪ್ರತಿಕ್ರಿಯೆಗಳನ್ನು ಶಾಸಕರ ಮೂಲಕ ಸಿಎಂ ಹಾಗೂ ಡಿಸಿಎಂ ಸ್ವೀಕರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜಾರಿಗೆ ಬರುವ ಇತರ ಭಾಗ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಸಮಾಲೋಚಿಸುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜನರ ಪ್ರತಿಕ್ರಿಯೆ ಯಾವ ರೀತಿ ಲಭಿಸುತ್ತಿದೆ ಎಂಬುದರ ಮಾಹಿತಿ ಕಲೆ ಹಾಕುತ್ತಿರುವ ರಾಜ್ಯ ನಾಯಕರು, ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಸಹ ಗಂಭೀರ ಚಿಂತನೆ ನಡೆಸಿದ್ದಾರೆ. ಅಲ್ಲದೇ ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಗೆಲ್ಲಲೇಬೇಕು ಎಂಬ ಪಣಕ್ಕೆ ಬಿದ್ದಿರುವ ಕಾಂಗ್ರೆಸ್ ನಾಯಕರು ಮುಂಬರುವ ದಿನಗಳಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಕುರಿತು ಸಲಹೆ ಸೂಚನೆ ನೀಡುತ್ತಿದ್ದಾರೆ.
ಚುನಾವಣೆ ಗೆಲ್ಲುವುದಕ್ಕೆ ಸಿದ್ಧತೆ : ಪ್ರತಿಯೊಬ್ಬ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಯೋಜನೆಗಳು ಹಾಗೂ ಹೊಸದಾಗಿ ಆರಂಭಿಸಿರುವ ಐದು ಭಾಗ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ.