ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದ್ದು ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವು ಕೈ ನಾಯಕರು ಪಾಲ್ಗೊಂಡಿದ್ದಾರೆ.
ನಿಗದಿತ ಸಂಖ್ಯೆಯಲ್ಲಿ ಶಾಸಕರು ಆಗಮಿಸಿಲ್ಲ. ಆದರೂ ವಿಧಾನಮಂಡಲ ಕಲಾಪ ಆರಂಭಕ್ಕೆ ಮುನ್ನವೇ ಶಾಸಕಾಂಗ ಸಭೆ ಪೂರ್ಣಗೊಳಿಸಿ ಶಾಸಕರಿಗೆ ನೀಡಬೇಕಾದ ನಿರ್ದೇಶನಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಸಭೆಯನ್ನು ಆರಂಭಿಸಲಾಗಿದೆ.
ಇಂದಿನಿಂದ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ. ಈ ಹಿನ್ನೆಲೆ ಹಿರಿಯ ಸದಸ್ಯರು ಚರ್ಚಿಸಬೇಕಾದ ವಿಚಾರಗಳು, ಕಿರಿಯ ಸದಸ್ಯರು ಪ್ರಸ್ತಾಪಿಸಬೇಕಾಗಿರುವ ವಿಚಾರಗಳ ಕುರಿತು ಸಿದ್ದರಾಮಯ್ಯ ಮಾರ್ಗದರ್ಶನ ನೀಡಲಿದ್ದಾರೆ. ಇದಲ್ಲದೆ ಹಲವು ವಿಚಾರಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಸಭೆಯ ಬಳಿಕ ಸಿದ್ದರಾಮಯ್ಯ ಹಾಗೂ ಇತರೆ ಸದಸ್ಯರು ಉಭಯ ಸದನಗಳ ಬಜೆಟ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.