ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮಹರ್ಷಿ ವಾಲ್ಮೀಕಿ ಜಯಂತಿಗೆ ಶುಭಾಶಯ ಕೋರಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಎಂ.ಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮತ್ತಿತರ ನಾಯಕರು ನಾಡಿನ ಜನತೆಗೆ ವಾಲ್ಮೀಕಿ ಜಯಂತಿ ಶುಭಾಶಯ ಸಲ್ಲಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಟ್ವೀಟ್ ಮಾಡಿ, ಹುಟ್ಟು ಆಕಸ್ಮಿಕ, ಸಾಧನೆ ಶಾಶ್ವತ ಎಂಬ ಬದುಕಿನ ಬಹುದೊಡ್ಡ ಪಾಠವನ್ನು ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ತೋರಿಸಿಕೊಟ್ಟವರು ಮಹಾಗುರು ವಾಲ್ಮೀಕಿ. ನಮ್ಮೆಲ್ಲರ ಬದುಕಿಗೆ ವಾಲ್ಮೀಕಿ ಮಹರ್ಷಿಯ ಸಾಧನೆ ಸ್ಫೂರ್ತಿಯಾಗಲಿ ಎಂದಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್ ತಮ್ಮ ಟ್ವೀಟ್ನಲ್ಲಿ, ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ 'ಆದಿಕವಿ' ಮಹರ್ಷಿ ವಾಲ್ಮೀಕಿ ಜಯಂತಿಯ ಉತ್ಸವದ ಶುಭಾಶಯಗಳು. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಅಮರಕವಿ ವಾಲ್ಮೀಕಿ ಮಹರ್ಷಿಗಳು ಇಡೀ ಜಗತ್ತಿಗೆ ಎತ್ತಿ ತೋರಿದ್ದಾರೆ ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪವಿತ್ರ ರಾಮಾಯಣದ ಮೂಲಕ ಜೀವನ ಮೌಲ್ಯ ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಟ್ವೀಟ್ನಲ್ಲಿ, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಜನಿಸಿ, ಮಹಾಕಾವ್ಯದ ರಚನೆ ಮೂಲಕ ಜಗತ್ಪ್ರಸಿದ್ಧರಾದವರು ಮಹರ್ಷಿ ವಾಲ್ಮೀಕಿಯವರು. ಅವರಿಗೆ ನನ್ನ ಗೌರವದ ನಮನಗಳು ಎಂದು ಹೇಳಿದ್ದಾರೆ.