ಬೆಂಗಳೂರು:ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಇಂದು ತಮ್ಮ 88ನೇ ವರ್ಷಕ್ಕೆ ಕಾಲಿರಿಸುತ್ತಿರುವ ದೇವೇಗೌಡರಿಗೆ ವಿವಿಧ ಪಕ್ಷದ ಮುಖಂಡರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮತ್ತಿತರ ನಾಯಕರು ಶುಭ ಕೋರಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕ ಹೆಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಆಯುಷ್ಯ, ಆರೋಗ್ಯ ನಿಮ್ಮದಾಗಲಿ. ರಾಜ್ಯ ಮತ್ತು ದೇಶಕ್ಕೆ ನಿಮ್ಮ ಅನುಭವದ ಮಾರ್ಗದರ್ಶನ ಸದಾ ಸಿಗಲಿ" ಎಂದು ಹಾರೈಸಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, "ಕರ್ನಾಟಕ ಕಂಡ ಮುತ್ಸದ್ದಿ, ದೇಶ ಕಂಡ ಮಹಾನ್ ರಾಜಕಾರಣಿ, ಜೆಡಿಎಸ್ ವರಿಷ್ಠ ನಾಯಕರು ಮತ್ತು ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಸುಖ ಮತ್ತು ಶಾಂತಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
"ಮುಖ್ಯಮಂತ್ರಿ ಮತ್ತು ಪ್ರಧಾನಿ ಹುದ್ದೆಯಂತಹ ಉನ್ನತ ಸ್ಥಾನದಲ್ಲಿದ್ದಾಗಲೂ ತಮ್ಮನ್ನು ತಾವು ‘ಮಣ್ಣಿನ ಮಗ’ ಎಂದೇ ಕರೆದುಕೊಳ್ಳುವ ವಿನಮ್ರ ಭಾವದ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಲ್ಲಿಕೆಯಾಗಬೇಕೆಂಬ ಕಾಳಜಿಯಿರುವ ಡಾ. ಹೆಚ್.ಡಿ.ದೇವೇಗೌಡರು ಕರ್ನಾಟಕದ ಹೆಮ್ಮೆ. ಅವರಿಗೆ ಜನ್ಮದಿನದ ಶುಭಾಶಯಗಳು." ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಶುಭ ಕೋರಿದ್ದಾರೆ.