ಬೆಂಗಳೂರು: ಭಾರತ ಸಂವಿಧಾನ ದಿನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಶುಭಾಶಯ ಸಲ್ಲಿಕೆ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್ ಸೇರಿದಂತೆ ಹಲವು ನಾಯಕರು ಶುಭಾಶಯ ಸಲ್ಲಿಕೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಟ್ವೀಟ್ನಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ, ವಿಶ್ವದ ಶ್ರೇಷ್ಠ ಸಂವಿಧಾನವಾದ ಭಾರತದ ಸಂವಿಧಾನವು ಅಂಗೀಕಾರವಾದ ಈ ದಿನದಂದು, ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು ಎಂದಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಟ್ವೀಟ್ನಲ್ಲಿ, ನಮ್ಮ ಸಂವಿಧಾನ ಎಂದರೆ ಮೌಲ್ಯಗಳ ಉಪದೇಶ ಅಲ್ಲ, ಆಶಯಗಳ ಘೋಷಣೆಯೂ ಅಲ್ಲ. ಇದು ಸಮಾನತೆಯ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕಾರ್ಯಕ್ರಮ. ನಾವೆಲ್ಲರೂ ಈ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವ ಪ್ರತಿಜ್ಞೆಯನ್ನು ಇಂದು ಮಾತ್ರವಲ್ಲ ನಿತ್ಯವೂ ಮಾಡೋಣ. ಭಾರತೀಯರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ತಮ್ಮ ಟ್ವೀಟ್ನಲ್ಲಿ, ದೇಶಾದ್ಯಂತ ಇಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾಜ್ಞಾನಿಯಾಗಿದ್ದು, ಅವರ ದೂರದೃಷ್ಟಿಯ ಫಲವಾಗಿ ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ ಇಂದು ನಮ್ಮ ಮುಂದಿದೆ. ಸಂವಿಧಾನ ರಚನಾ ಸಭೆಯಲ್ಲಿ 250 ಕ್ಕೂ ಹೆಚ್ಚು ಸದಸ್ಯರು ಇದ್ದರಾದರೂ ಇದರ ಪ್ರಮುಖ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ಕರ್ತೃ ಎಂದು ಹೇಳಲಾಗುತ್ತದೆ.