ಬೆಂಗಳೂರು:ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿಜಯ ಸಾಧಿಸಬೇಕಾದರೆ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಕುಸುಮಾ ಹನುಮಂತರಾಯಪ್ಪಗೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಮಾರ್ಗದರ್ಶನ ನೀಡಿದ್ದಾರೆ.
ಆರ್.ಆರ್.ನಗರ ಗೆಲ್ಲುವುದು ಸದ್ಯದ ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಎದುರಾಗಿರುವ ಮೊದಲ ಉಪಚುನಾವಣೆ ಇದಾಗಿದೆ. ಪ್ರತಿಷ್ಠೆಯ ಪ್ರಶ್ನೆಯಾಗಿದ್ದರಿಂದ ಸಾಕಷ್ಟು ಅಳೆದು ತೂಗಿ ಕುಸುಮ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡಿದೆ. ಇದೀಗ ಅವರನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ತಂತ್ರಗಾರಿಕೆ ರೂಪಿಸಲು ಬೇಕಾದ ಅನಿವಾರ್ಯ ಎದುರಾಗಿದೆ. ಈ ಹಿನ್ನೆಲೆ ಪ್ರಚಾರ ಸಂದರ್ಭ ಹಾಗೂ ಚುನಾವಣೆ ಮತದಾನದ ದಿನದವರೆಗೆ ಯಾವ ರೀತಿ ನಡವಳಿಕೆ ತೋರಿಸಬೇಕು ಎಂಬ ಕುರಿತು ಕಾಂಗ್ರೆಸ್ ಹಿರಿಯ ನಾಯಕರು ಕುಸುಮ ಹನುಮಂತರಾಯಪ್ಪ ನೀತಿಪಾಠ ಹೇಳಿದ್ದಾರೆ.
ಸುಮಲತಾ ಮಾರ್ಗ ಅನುಸರಿಸಲು ಸಲಹೆ:
ಮಂಡ್ಯದಲ್ಲಿ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾ ಅನುಸರಿಸಿದ ಮಾರ್ಗ ಅನುಸರಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದಾರೆ. ಕೆಪಿಸಿಸಿ ಮಾಧ್ಯಮ ಮುಖ್ಯಸ್ಥ ಬಿ.ಎಲ್.ಶಂಕರ್ ಇಂದು ಕುಸುಮಾಗೆ ನೀತಿಪಾಠ ಮಾಡಿದ್ದಾರೆ. ಕೆಪಿಸಿಸಿ ಕಚೇರಿಗೆ ಕರೆಸಿಕೊಂಡಿದ್ದ ಅವರು ಕುಸುಮಾಗೆ ಒಂದು ಗಂಟೆಗಳ ಕಾಲ ಪಾಠ ಮಾಡಿದ್ದಾರೆ. ಪ್ರಚಾರದ ವೇಳೆ ಜನರ ಮುಂದೆ ಹೇಗೆ ನಡೆದುಕೊಳ್ಳಬೇಕು, ಮಾತನಾಡುವ ವೇಳೆ ಬಾಯಿಮೇಲೆ ಹೇಗೆ ಹಿಡಿತ ಸಾಧಿಸಬೇಕು, ಹಿರಿಯ ಮತದಾರರ ಬಳಿ ಹೇಗೆ ಗೌರವವನ್ನ ನೀಡಬೇಕು, ಯುವ ಮತದಾರರಿಗೆ ಹೇಗೆ ಸೌಜನ್ಯದಿಂದ ಮಾತನಾಡಿಸಬೇಕು, ಎದುರಾಳಿಗಳ ಬಗ್ಗೆಯೂ ಯಾವುದೇ ಕೆಟ್ಟಪದ ಬಳಸದಂತೆ ಸಲಹೆ ನೀಡಿದ್ದಾರೆ.
ಬಿಎಲ್ ಶಂಕರ್ ಜೊತೆ ಶಾಸಕಿ ಸೌಮ್ಯಾ ರೆಡ್ಡಿ ಕೂಡ ಉಪಸ್ಥಿತರಿದ್ದು ಕುಸುಮಾಗೆ ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನವೆಂಬರ್ 3ರಂದು ಮತದಾನ ನಡೆಯುವವರೆಗೂ ನೀತಿಪಾಠವನ್ನು ಪಾಲಿಸಿ ಮುಂದುವರಿಯುವುದಾಗಿ ಕುಸುಮ ಕೂಡ ಭರವಸೆ ನೀಡಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾ ಗೆಲುವಿಗೆ ಅನುಸರಿಸಿದ ತಂತ್ರಗಾರಿಕೆಯ ಇದೀಗ ಕೂಡ ಮುಂದುವರಿಸಲಿದ್ದಾರೆ. ಈಗಾಗಲೇ ಎರಡು ಸಾರಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಮುನಿರತ್ನ 3ನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಹಿಡಿತ ಹೊಂದಿರುವ ಅವರು ಯಾವ ರೀತಿ ಇಂತಹ ತಂತ್ರಗಾರಿಕೆಯನ್ನು ಎದುರಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.