ಬೆಂಗಳೂರು : ವಿಧಾನಪರಿಷತ್ ನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಮುಂದಾಗಿದ್ದ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಹೋರಾಟ ಕೈಬಿಟ್ಟಿದ್ದಾರೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ್ದ ಪ್ರತಿಪಕ್ಷಕ್ಕೆ ಎರಡು ಕಡೆಯೂ ನಿಲುವಳಿ ಸೂಚನೆ ತಿರಸ್ಕರಿಸಿರುವುದು ತೀವ್ರ ಬೇಸರ ಉಂಟುಮಾಡಿದೆ. ಕೆಎಸ್ ಈಶ್ವರಪ್ಪ ರಾಷ್ಟ್ರದ್ರೋಹಿ ಹೇಳಿಕೆ ನೀಡಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸಿ ಸಚಿವ ಸ್ಥಾನದಿಂದ ವಜಾಗೊಳಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷ ಉಭಯ ಸದನಗಳಲ್ಲೂ ಹೋರಾಟ ನಡೆಸುತ್ತಿದೆ.
ನಾಳೆ ಬೆಳಗ್ಗೆ ಹನ್ನೊಂದು ಗಂಟೆಯವರೆಗೂ ರಾಜ್ಯಸರ್ಕಾರಕ್ಕೆ ಗಡುವು ವಿಧಿಸಿರುವ ಕಾಂಗ್ರೆಸ್ ನಾಯಕರು, ಇಷ್ಟಾದರೂ ಸರ್ಕಾರ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಸದನದ ಒಳಗೆ ಹಾಗೂ ಹೊರಗೆ ತನ್ನದೇ ಆದ ಹೋರಾಟ ಕೈಗೊಳ್ಳಲು ತೀರ್ಮಾನಿಸಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರತಿನಿಧಿಗಳು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತೀರ್ಮಾನ ಹಿಂಪಡೆಯುವ ನಿರ್ಧಾರ ಪ್ರಕಟ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮತ್ತಿತರರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ತೀರ್ಮಾನ ಪ್ರಕಟಿಸಲಾಗಿದೆ. ಈ ಸುದ್ದಿಗೋಷ್ಠಿಗೆ ಮುನ್ನವೇ ವಿಧಾನಪರಿಷತ್ ನಲ್ಲಿ ಆಹೋರಾತ್ರಿ ಧರಣಿ ನಡೆಸಲು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರು.