ಬೆಂಗಳೂರು :ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೃಹತ್ ಸೈಕಲ್ ಜಾಥಾ ನಡೆಸಿದರು. ಈ ವೇಳೆ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಜಾಥಾ ಆರಂಭವಾಯಿತು. ಹೆಬ್ಬಾಳದಿಂದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದವರೆಗೆ ಸೈಕಲ್ ಜಾಥಾ ನಡೆಸಲು ಈ ಮೊದಲು ತೀರ್ಮಾನಿಸಲಾಗಿತ್ತು.
ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಆದರೆ, ಕೋವಿಡ್ ನಿಯಮಾವಳಿಗಳನ್ನು ಮುಂದಿಟ್ಟು ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಬಲವಂತವಾಗಿ ಸೈಕಲ್ ಜಾಥಾ ನಡೆಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಪೊಲೀಸರು ತಮ್ಮನ್ನು ಬಂಧಿಸುವುದನ್ನು ಖಂಡಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ನಾವು ಇಂದು ಪೊಲೀಸರಿಂದ ಪರವಾನಿಗೆ ಪಡೆದೇ ಸೈಕಲ್ ಜಾಥಾ ಹಮ್ಮಿಕೊಂಡಿದ್ದೆವು.
ಆದರೆ, ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ನಮಗೆ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಪರವಾನಿಗೆ ಪ್ರತಿ ನಮ್ಮ ಬಳಿ ಇದ್ದರೂ ಸಹ ಅವಕಾಶ ಸಿಗದಿರುವುದು ಬೇಸರ ತಂದಿದೆ. ಇದೇ ರೀತಿ ಕಾರ್ಯವನ್ನು ಸರ್ಕಾರ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾಥಾದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಬಿ.ವಿ, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅನಿಲ್ ಕುಮಾರ್ ಯಾದವ್, ಸುರಭಿ ದ್ವಿವೇದಿ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ:ಬಿಜೆಪಿ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಡಿಕೆಶಿ ಅವರ ವಿರುದ್ಧ ಅವಹೇಳನ ಮಾಡುತ್ತಿದೆ : ಮನೋಹರ್