ಬೆಂಗಳೂರು: ಸಚಿವ ಕೆ. ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಇಂದೂ ಸಹ ವಿಧಾನಸಭೆಯಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ಈಶ್ವರಪ್ಪ ರಾಜೀನಾಮೆ ಬೇಕೇ ಬೇಕು ಎಂದು ಘೋಷಣೆ ಕೂಗಿದರು.
ಪೀಠಕ್ಕೆ ಬಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಮಳ್ಳೂರು ಆನಂದ್ ರಾವ್ ಅವರಿಗೆ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು. ಆಗ ಎಲ್ಲಾ ಸದಸ್ಯರು ನಿಶಬ್ದರಾದರು. ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಆರಂಭಿಸಿದರು.
ಸಂತಾಪ ಸೂಚನೆ ನಿರ್ಣಯ ಮುಗಿಯುತ್ತಿದ್ದಂತೆ ಸ್ಪೀಕರ್ ಕಾಗೇರಿ ಅವರು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು. ಆಗಲೂ ಸಹ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಘೋಷಣೆ ಕೂಗುತ್ತಲೇ ಇದ್ದರು. ಆರ್ಎಸ್ಎಸ್ ಧ್ವಜ ಬೇಡವೇ ಬೇಡ, ಕೊಡಿ ಕೊಡಿ ರಾಜೀನಾಮೆ ಕೊಡಿ ಅಂತ ಧಿಕ್ಕಾರ ಕೂಗಿದರು. ಪ್ರತಿಭಟನೆ ಮಧ್ಯೆ ಸಚಿವ ಕೆ. ಎಸ್ ಈಶ್ವರಪ್ಪ ಸುಮ್ಮನೆ ಕುಳಿತಿದ್ದರು.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಮಧ್ಯೆ ಪ್ರಶ್ನೋತ್ತರ ಕಲಾಪ ಆರಂಭವಾಯಿತು. ಈ ನಡುವೆ ಸ್ಪೀಕರ್, ತಮ್ಮ ತಮ್ಮ ಸ್ಥಾನಕ್ಕೆ ಹಿಂತಿರುಗಿ ಪ್ರಶ್ನೆ ಕೇಳುವಂತೆ ಕೈ ಶಾಸಕರಿಗೆ ಸೂಚಿಸಿದರು. ಸದನದಲ್ಲಿ ಪ್ರಶ್ನೋತ್ತರ ಅಂದರೆ ಸಾಕಷ್ಟು ಮಹತ್ವದ ಕ್ಷಣ. ಪ್ರಶ್ನೋತ್ತರದಲ್ಲಿ ಆಡಳಿತ ವಿಪಕ್ಷ ಅಂತ ಇಲ್ಲ. ಸಮಸ್ಯೆಗಳನ್ನು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪ್ರಶ್ನೆ ಕೇಳುವ ಸಂದರ್ಭ ಇದು. ನೀವೆಲ್ಲ ಪ್ರಶ್ನೆ ಕೇಳಿಲ್ಲ ಅಂದರೆ ನಿಮ್ಮ ಕ್ಷೇತ್ರದ ಜನತೆ ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟಾದರೂ ಸದನದಲ್ಲಿ ಪ್ರತಿಭಟನಾನಿರತ ಕಾಂಗ್ರೆಸ್ ಶಾಸಕರು ಬಿತ್ತಿಪತ್ರ ಪ್ರದರ್ಶನ ಮಾಡಿ ಘೋಷಣೆ ಕೂಗುತ್ತಲೇ ಇದ್ದರು. ನಿಮಗೆ ನ್ಯಾಯ ಕೊಡ್ತೇನೆ. ಸಮಾಧಾನವಾಗಿ ನನ್ನ ಮಾತು ಕೇಳಿ, ಕಾಂಗ್ರೆಸ್ ಸದಸ್ಯರಿಗೆ ಸ್ಪೀಕರ್ ಕಾಗೇರಿ ಮನವಿ ಮಾಡಿಕೊಂಡರು. ಸ್ಪೀಕರ್ ಮನವಿಗೆ ಸ್ಪಂದಿಸದ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರೆಸಿದರು.
ಗದ್ದಲದ ಮಧ್ಯೆ ಪ್ರಶ್ನೋತ್ತರ ಕಲಾಪ ಮುಕ್ತಾಯವಾಯಿತು. ರಾಜ್ಯಪಾಲರ ಭಾಷಣ ಒಂದನಾ ನಿರ್ಣಯದ ಮೇಲೆ ಮಾತನಾಡಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಅವಕಾಶ ನೀಡಿದರೂ ಅವರು ಮಾತನಾಡಲು ಬರಲಿಲ್ಲ. ಪ್ರತಿಭಟನೆ ನಡುವೆಯೇ ಕರ್ನಾಟಕ ಸ್ಟಾಂಪು (ಎರಡನೇ ತಿದ್ದುಪಡಿ) ವಿಧೇಯಕ ವನ್ನು ಕಂದಾಯ ಸಚಿವ ಆರ್. ಅಶೋಕ್ ಮಂಡಿಸಿದರು.
ರಾಜ್ಯ ಸರ್ಕಾರ ಆರ್ಎಸ್ಎಸ್ ಕೈಗೊಂಬೆ ಎಂದು ಕಾಂಗ್ರೆಸ್ ಕಿಡಿಕಾರಿದ್ದು, ಸದನದಲ್ಲಿ ಕಾಂಗ್ರೆಸ್ ತೀವ್ರ ಹೋರಾಟದ ಹಿನ್ನೆಲೆ ಸ್ಪೀಕರ್ ಸದನವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದರು.
ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಬಂಧನ:ಸಚಿವ ಕೆ. ಎಸ್ ಈಶ್ವರಪ್ಪ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕಲಬುರಗಿಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವ ಕೆ. ಎಸ್ ಈಶ್ವರಪ್ಪ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಆಕ್ರೋಶ ಭುಗಿಲೆದ್ದು. ಕಲಬುರಗಿಯಲ್ಲಿ ಕಾಂಗ್ರೆಸ್ ಯುವ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.