ಬೆಂಗಳೂರು :ರಾಹುಲ್ ಗಾಂಧಿಯವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿರುವ ಕ್ರಮ ವಿರೋಧಿಸಿ ದೇಶದೆಲ್ಲೆಡೆ ಕಾಂಗ್ರೆಸ್ನಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಇಂದು ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಪಕ್ಷದ ನಾಯಕರು, ಕಾರ್ಯಕರ್ತರು ಸತ್ಯಾಗ್ರಹ ನಡೆಸಿದರು. ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಿರುವ ಸತ್ಯಾಗ್ರಹ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಾಜ್ಯ ರಾಜಧಾನಿಯಲ್ಲೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನಾ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮತ್ತಿತರ ನಾಯಕರು ಭಾಗವಹಿಸಿದ್ದರು. ಇನ್ನು ರಾಷ್ಟ್ರ ರಾಜಧಾನಿಯ ರಾಜ್‌ಘಾಟ್‌ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಇತರೆ ನಾಯಕರು ಭಾಗಿಯಾಗಿದರು.
ಕಳ್ಳರನ್ನು ಕಳ್ಳ ಅಂತ ರಾಹುಲ್ ಗಾಂಧಿ ಕರೆದಿದ್ದಾರೆ- ಬಿ ಕೆ ಹರಿಪ್ರಸಾದ್ :ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರು, ಬಿಜೆಪಿ ಆಡಳಿತದಲ್ಲಿ ದೇಶ ಅಪಾಯದಲ್ಲಿದೆ ಎಂದು ಸತ್ಯಾಗ್ರಹದಲ್ಲಿ ಬೇಸರ ವ್ಯಕ್ತಪಡಿಸಿ ಧರಣಿ ನಡೆಸಲಾಯಿತು. ಈ ವೇಳೆ ಬಿ.ಕೆ ಹರಿಪಸ್ರಾದ್ ಅವರು ಮಾತನಾಡಿ, ಕಳ್ಳರನ್ನು ಕಳ್ಳ ಅಂತ ರಾಹುಲ್ ಗಾಂಧಿ ಕರೆದಿದ್ದಾರೆ. ಅದು ಬಿಟ್ಟು ಬೇರೇನು ಹೇಳಿಲ್ಲ. ಭಾರತ್ ಜೋಡೋ ಯಶಸ್ಸು ಅಮಿತ್ ಶಾ, ನರೇಂದ್ರ ಮೋದಿ, ಜೆ ಪಿ ನಡ್ಡಾಗೆ ತೆಡೆದುಕೊಳ್ಳಲು ಆಗುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವತಂತ್ರ ಇದೆ. ಆದರೆ ಲೋಕಸಭೆಯಲ್ಲಿ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಬದಲಿಗೆ ನೇರವಾಗಿ ರಾಹುಲ್ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಇದಕ್ಕಿಂತ ಕೆಟ್ಟ ರಾಜಕೀಯ ಮತ್ತೊಂದಿಲ್ಲ ಎಂದು ಕಿಡಿಕಾರಿದರು.