ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್, ಪ್ರತಿಭಟನೆಯ ಸ್ವಾಗತ ನೀಡಿದೆ. ಅದಾನಿ ಗ್ರೂಪ್ ಹಗರಣದ ತನಿಖೆಗೆ ಒತ್ತಾಯ ಮಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕೈ ನಾಯಕರು ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಿಂದಾಗಿ ಬೆಂಗಳೂರಿನ ಹಲವಾರು ಕಡೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಯಿತು. ಹಳೆ ಮೈಸೂರು ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಹೊಸೂರು ರಸ್ತೆ, ಕಾರ್ಪೋರೇಶನ್, ಎಂಜಿ ರೋಡ್ ಸುತ್ತಾಮುತ್ತಾ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು.
ಎಲ್ಐಸಿ, ಎಸ್‌ಬಿಐ ಬ್ಯಾಂಕ್‌ಗಳನ್ನು ಒತ್ತಾಯಪೂರ್ವಕವಾಗಿ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿಸಿದ್ದಾರೆ. ದೇಶದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹಿಂಡನ್‌ಬರ್ಗ್ ಸಂಶೋಧನಾ ವರದಿಯಿಂದ ಹಗರಣ ಬೆಳಕಿಗೆ ಬಂದಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಅಥವಾ ಜಂಟಿ ಸಂಸದೀಯ ಸಮಿತಿಯ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು. ಅದಾನಿ ಗ್ರೂಪ್ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕೆಂದು ಒತ್ತಾಯ ಮಾಡಿದರು.
ಎಲ್ಐಸಿ ಎಸ್‌ಬಿಐ ಮುಂದೆ ಪ್ರತಿಭಟನೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಐಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಎರಡು ಸಂಸ್ಥೆಗಳ ಮುಂದೆ ಪ್ರತಿಭಟನೆ ಮಾಡಲು ನಮಗೆ ಆದೇಶ ಬಂದಿತ್ತು. ಅದಕ್ಕೆ ಇಲ್ಲೆ ಎಲ್ಐಸಿ, ಸ್ಟೆಟ್ಬ್ಯಾಂಕ್ ಇದಾವೆ ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಎಲ್ಐಸಿ ಅವರು ಅದಾನಿ ಗ್ರೂಪ್ ನಲ್ಲಿ 36 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಇವೆರಡು ಸಂಸ್ಥೆಯಲ್ಲಿರುವ ಹಣ ಸಾರ್ವಜನಿಕರದ್ದು. ಹಿಂಡೆನ್ ಬರ್ಗ ವರದಿ ಪ್ರಕಾರ ಎಲ್ಐಸಿ ಸಂಸ್ಥೆಗೆ 18 ಸಾವಿರ ಕೋಟಿ ನಷ್ಟ ಆಗಿದೆ. 2014ರಿಂದ ಈಚೆಗೆ 10 ಲಕ್ಷ ಕೋಟಿ 25 ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಅದಾನಿಗೆ 10 ಲಕ್ಷ ಕೋಟಿ ನಷ್ಟ ಆಗಿದೆ. ಅದು ಯಾರ ದುಡ್ಡು ಎಲ್ಐಸಿ, ಸ್ಟೇಟ್ ಬ್ಯಾಂಕ್ ಹಣ. ಇದರ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ.