ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಇಂದು ಬೃಹತ್ ಪ್ರತಿಭಟನೆ ಸೈಕಲ್ ರ್ಯಾಲಿಯಲ್ಲಿ ಸೈಕಲ್ ತುಳಿದದ್ದೇ ದೊಡ್ಡ ಮಟ್ಟದಲ್ಲಿ ಗಮನಸೆಳೆಯಿತು.
ಒಂದೆಡೆ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸೈಕಲ್ ಏರಿದ್ದ ಡಿ ಕೆ ಶಿವಕುಮಾರ್ ನಿರಾಯಾಸವಾಗಿ ಸೈಕಲ್ ಓಡಿಸಿದ್ರೆ, ಇದರ ಇಂಥದ್ದೊಂದು ಸೈಕಲ್ ತಾವು ಬಳಸಿದ್ರೆ ಅನುಕೂಲವಾಗುತ್ತದೆ ಎಂಬ ಅರಿವಿಲ್ಲದೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗೇರ್ ಚಾಲಿತ ಸೈಕಲ್ ಬಳಸಿ ಪೆಡಲ್ ತುಳಿದರು. ಸದಾಶಿವನಗರ ನಿವಾಸದಿಂದ ಕೆಪಿಸಿಸಿ ಕಚೇರಿಗೆ ಹಾಗೂ ಅಲ್ಲಿಂದ ಮಿನ್ಸ್ಕ್ ಚೌಕ್‌ದವರೆಗೂ ಡಿಕೆಶಿ ಎಲೆಕ್ಟ್ರಿಕ್ ಚಾಲಿತ ಸೈಕಲ್ ತುಳಿದ್ರೆ ಸಿದ್ದರಾಮಯ್ಯ ಮಾತ್ರ ಶಿವಾನಂದ ವೃತ್ತ ಸಮೀಪವಿರುವ ಸರ್ಕಾರಿ ನಿವಾಸದಿಂದ ಕೆಪಿಸಿಸಿ ಕಚೇರಿ ಹಾಗೂ ಅಲ್ಲಿಂದ ಪ್ರತಿಭಟನೆ ಸ್ಥಳದವರೆಗೂ ಗೇರ್ ಚಾಲಿತ ಸೈಕಲ್ ತುಳಿದರು. ಸಿದ್ದರಾಮಯ್ಯ ಸಂಪೂರ್ಣ ಸುಸ್ತಾಗಿ ಹೋಗಿದ್ದರು. ಶಿವಕುಮಾರ್ ಮಾತ್ರ ನಿರಾಳವಾಗಿ ಇದ್ದದ್ದು ಕಂಡು ಬಂತು.
ಸೈಕಲ್ ಏರಿ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಜತೆಗೆ ಕಾಂಗ್ರೆಸ್ ಮುಖಂಡರು ಸ್ವಯಂಚಾಲಿತ ಎಲೆಕ್ಟ್ರಿಕ್ ಸೈಕಲ್ ಆರಂಭದಲ್ಲಿ ಪೆಡಲ್ ತುಳಿದ್ರೆ ಸಾಕು ಬಳಿಕ ಸ್ವಯಂಚಾಲಿತವಾಗಿ ಸಾಗುತ್ತದೆ. ಇದನ್ನ ಡಿಕೆಶಿ ಬಳಸಿದ್ದರು. ಆದರೆ, ವಾರದ ಹಿಂದೆ ಗೇರ್ ಚಾಲಿತ ಸೈಕಲ್ ಖರೀದಿಸಿರುವ ಸಿದ್ದರಾಮಯ್ಯ ನಿರಂತರ ತರಬೇತಿ ಪಡೆದಿದ್ದು, ಇಂದು ಅದೇ ಸೈಕಲ್‌ನ ತುಳಿದು ಸುಸ್ತಾದರು.
ಸೈಕಲ್ ತುಳಿಯಲು ಪರದಾಡಿದ ಕಾಂಗ್ರೆಸ್ ನಾಯಕರು ಸೈಕಲೇರಿ ಸುಸ್ತಾದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ :ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಕಚೇರಿಯಿಂದ ಪ್ರತಿಭಟನಾ ಸ್ಥಳಕ್ಕೆ ಸಾಮಾನ್ಯ ಸೈಕಲ್ ಏರಿ ಎಲ್ಲರ ಜೊತೆ ಹೊರಟರು. ಆದರೆ, ಕೆಲ ದೂರ ಸಾಗುವ ಹೊತ್ತಿಗೆ ಸುಸ್ತಾಗಿ ಹೋಗಿದ್ದರು. ಏರುಮುಖದ ರಸ್ತೆಯಲ್ಲಿ ಸೈಕಲ್ ಓಡಿಸಲಾಗದೆ ಅವರು ಪರದಾಡಿದರು. ಕಾರ್ಯಕರ್ತರೊಬ್ಬರು ಸೈಕಲ್‌ನ ಹಿಂಬದಿಯಿಂದ ಕೆಲ ದೂರ ತಳ್ಳಿಕೊಂಡು ಹೋಗಿದ್ದು ಕಂಡು ಬಂತು. ಇದೇ ರೀತಿ ರಾಮಲಿಂಗಾರೆಡ್ಡಿ, ವಿ ಎಸ್ ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರು ಸೈಕಲ್ ಓಡಿಸಿದ ಸಂದರ್ಭ ಪರದಾಡಿದ್ದು ಕಂಡು ಬಂತು.
ಪ್ರತಿಭಟನೆ ಬಳಿಕ ಅನಾಥವಾಗುಳಿದ ಸೈಕಲ್‌ಗಳು ಸೈಕಲ್ ಮರೆತ ನಾಯಕರು :ಕೆಪಿಸಿಸಿ ಕಚೇರಿಯಿಂದ ಪ್ರತಿಭಟನಾ ಸ್ಥಳಕ್ಕೆ ಸೈಕಲ್ನಲ್ಲಿ ಆಗಮಿಸಿದ ನಾಯಕರು ಹಾಗೂ ಕಾರ್ಯಕರ್ತರು ಆನಂತರ ಸೈಕಲ್ ಮರೆತದ್ದು ಕಂಡು ಬಂತು. ವಿವಿಧ ಕಂಪನಿಗಳಿಂದ ಬಾಡಿಗೆಗೆ ತಂದಿದ್ದ ಸೈಕಲ್ಗಳನ್ನು ಕಾರ್ಯಕರ್ತರು ಎಲ್ಲೆಂದರಲ್ಲಿ ಬಿಟ್ಟುಹೋಗಿದ್ದು ಕಾಣಿಸಿತು. ಕೆಪಿಸಿಸಿ ಕಚೇರಿ ಬಳಿಯೇ ಕೆಲ ಸೈಕಲ್‌ಗಳು ಬಿದ್ದಿದ್ದರೆ ಮತ್ತೆ ಕೆಲವು ಮಿನ್ಸ್ಕ್ ಚೌಕ್‌ದ ಸುತ್ತಮುತ್ತ ನಿಂತಿರುವುದು ಕಂಡು ಬಂದವು. ಸಾಂಕೇತಿಕ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಕೊನೆಯಲ್ಲಿ ಪ್ರತಿಭಟನೆಯ ಪ್ರಮುಖ ಉದ್ದೇಶವೇ ಆಗಿದ್ದ ಸೈಕಲ್‌ಗಳನ್ನೇ ಮರೆತಂತಿತ್ತು..