ಬೆಂಗಳೂರು :ಬಿಜೆಪಿ ಸರ್ಕಾರದ ತೈಲ ಬೆಲೆ ಏರಿಕೆ, ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಹಾಲಕ್ಷ್ಮಿಲೇಔಟ್ನ ಕುರುಬರಹಳ್ಳಿ ವೃತ್ತದಿಂದ ಶಂಕರಮಠ ಸರ್ಕಲ್ವರೆಗೆ ಸೈಕಲ್ ಜಾಥಾ ನಡೆಸಿದರು.
ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಪಕ್ಷದವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಆಗ ಬಿ. ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಪ್ರತಿಭಟಿಸಿದ್ದರು. ಇಂದು ಪೆಟ್ರೋಲ್ 105 ರೂಪಾಯಿ, ಡೀಸೆಲ್ 96 ರೂಪಾಯಿ, ಅಡುಗೆ ಅನಿಲ 840 ರೂಪಾಯಿ ಆಗಿದೆ. ಹೀಗಿದ್ದರೂ ಬಿಜೆಪಿ ಪಕ್ಷದವರು ಮೌನವಹಿಸಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ದುರಂತಕ್ಕೆ ಬಿಜೆಪಿ ಕಾರಣ : ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಮತ್ತು ಸೌಜನ್ಯವಿಲ್ಲ. 140 ಕೋಟಿ ಜನಸಂಖ್ಯೆಗೆ ಸುಮಾರು 280 ಕೋಟಿ ಲಸಿಕೆ ಬೇಕು. ಆದರೆ, ಈವರಗೆ 36 ಕೋಟಿ ಲಸಿಕೆ ಮಾತ್ರ ನೀಡಿದ್ದಾರೆ. ಬಡವರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವಾಗುತ್ತಿಲ್ಲ. ಗಂಗಾ ನದಿಯಲ್ಲಿ 20 ಸಾವಿರ ಮೃತದೇಹ ಬಿಸಾಡಿದ್ದಾರೆ. ಇಂತಹ ದುರಂತಕ್ಕೆ ಕಾರಣಕವೇ ಬಿಜೆಪಿ ಸರ್ಕಾರ. ಆತ್ಮನಿರ್ಭರ್ ಅಲ್ಲ, ಆತ್ಮಬರ್ಭರ ಭಾರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.