ಬೆಂಗಳೂರು:ಗುತ್ತಿಗೆದಾರ ಸಂತೋಷ್ ಪಾಟೀಲ್ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಎಂ ನಿವಾಸದಿಂದ 100 ಮೀಟರ್ ಅಂತರದಲ್ಲಿರುವ ಆರಾಧ್ಯ ವೃತ್ತದಲ್ಲೇ ಕಾಂಗ್ರೆಸ್ ನಾಯಕರನ್ನು ತಡೆದ ಪೊಲೀಸರು ಮುಂದೆ ತೆರಳಲು ಅವಕಾಶ ನೀಡಲಿಲ್ಲ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಕಾಲ್ನಡಿಗೆ ಮೂಲಕ ಹೊರಟು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ .ವಿ.ಶ್ರೀನಿವಾಸ್ ಮತ್ತಿತರ ನಾಯಕರು ರಸ್ತೆಗೆ ಅಡ್ಡಲಾಗಿ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಹತ್ತಿ ಸಿಎಂ ನಿವಾಸದ ತೆರಳಲು ಪ್ರಯತ್ನಿಸಿದರು.
ಆಗ ಪೊಲೀಸರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ಕಾರ್ಯ ಮಾಡಿದರು. ಈ ಸಂದರ್ಭ ಕೆಲ ಕಾರ್ಯಕರ್ತರು ಪ್ರತಿರೋಧವೊಡ್ಡಿದ್ದರು. ಹೀಗಾಗಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಕೆಲಕಾಲ ವಾಕ್ಸಮರ ನಡೆಯಿತು. ಅಂತಿಮವಾಗಿ ಪ್ರತಿಭಟನಾನಿರತರನ್ನು ತಡೆದ ಪೊಲೀಸರು ಬಸ್ಸುಗಳಲ್ಲಿ ತುಂಬಿಕೊಂಡು ಬೇರೆಡೆ ಕರೆದೊಯ್ದರು.