ಬೆಂಗಳೂರು: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಯುವತಿಯ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ ಕಾಂಗ್ರೆಸ್ ನಾಯಕರು ಪಂಜಿನ ಮೆರವಣಿಗೆ ನಡೆಸಿದರು.
ಬೆಂಗಳೂರಿನ ರಾಜಾಜಿನಗರದ ಕುರುಬರಹಳ್ಳಿಯ ಡಾ.ರಾಜ್ ಕುಮಾರ್ ಪ್ರತಿಮೆ ಬಳಿ ಪ್ರತಿಭಟನಾ ಪಂಜಿನ ಮೆರವಣಿಗೆ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಬಿಬಿಎಂಪಿ ಸದಸ್ಯ ಎಂ. ಶಿವರಾಜು, ಮಹಾಲಕ್ಷ್ಮಿ ವಾರ್ಡ್ ಬಿಬಿಎಂಪಿ ಸದಸ್ಯ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡರು, ಬ್ಲಾಕ್ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿಗೆ ಜಾತ್ಯತೀತ ಸಿದ್ದಾಂತದ ಬಗ್ಗೆ ನಂಬಿಕೆ ಇಲ್ಲ, ಕೋಮುವಾದಿ ನಿಲುವು ಇಟ್ಟುಕೊಂಡಿರುವ ಪಕ್ಷ ಬಿಜೆಪಿ. ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದರೂ ಪ್ರಧಾನ ಮಂತ್ರಿಗಳು ಒಂದು ಮಾತನ್ನೂ ಆಡುತ್ತಿಲ್ಲ. ಹುಚ್ಚನಿಗೆ ಹೆಣ್ಣು ಕೊಡಬಾರದು, ಸನ್ಯಾಸಿಗೆ ಅಧಿಕಾರ ಕೊಡಬಾರದು ಎಂಬ ಸ್ಥಿತಿ ದೇಶದಲ್ಲಿ ಒದಗಿ ಬಂದಿದೆ ಎಂದು ಟೀಕಿಸಿದರು.
ಸಲೀಂ ಅಹಮದ್ ಮಾತನಾಡಿ, ಇಡೀ ವಿಶ್ವವೇ ಉತ್ತಪ್ರದೇಶದ ಘಟನೆಯನ್ನ ಸೂಕ್ಷ್ಮವಾಗಿ ನೋಡುತ್ತಿದೆ. ದಲಿತ ಯುವತಿಯ ಅತ್ಯಾಚಾರ, ಕೊಲೆ ನಡೆದರೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಂಸದೆ ಶೋಭಾ ಕರಂದ್ಲಾಜೆಯವರು ಮಹಿಳೆಯರ ಪರ ಯಾಕೆ ಧ್ವನಿ ಎತ್ತುತ್ತಿಲ್ಲ. ಮಹಿಳೆಯರ ಮತದಿಂದ ಗೆದ್ದು ಬಂದ ಸರ್ಕಾರ ನಡೆದುಕೊಳ್ಳುವ ರೀತಿಯೇ ಇದು. ಉತ್ತರ ಪ್ರದೇಶ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಂ. ಶಿವರಾಜು ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಗಳ ಅತ್ಯಾಚಾರ, ಕೊಲೆ ಮಾಡಿದ ವ್ಯಕ್ತಿಗಳ ರಕ್ಷಣೆ ಮಾಡಲಾಗುತ್ತಿದೆ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಬಾರದು. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದರು.