ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು ಹಲವು ಮಹತ್ವದ ವಿಚಾರಗಳ ಚರ್ಚೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಹಾಗು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಮಾಜಿ ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು ಪಾಲ್ಗೊಂಡಿದ್ದರು.
ಬಜೆಟ್ ಮೇಲೆ ಕೈಗೊಳ್ಳಬೇಕಾದ ಚರ್ಚೆ ಹಾಗೂ ಸರ್ಕಾರದ ವಿರುದ್ಧ ಕೈಗೊಳ್ಳುವ ಹೋರಾಟದ ಬಗ್ಗೆ ಶಾಸಕಾಂಗ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಬಜೆಟ್ ಸಂದರ್ಭ ಕೈಗೊಳ್ಳಬಹುದಾದ ಚರ್ಚೆಗಳ ಕುರಿತು ಸಿದ್ದರಾಮಯ್ಯ ಸದಸ್ಯರಿಂದ ಸಲಹೆ ಸೂಚನೆ ಸ್ವೀಕರಿಸಿದರು. ರಾಜ್ಯದಲ್ಲಿ 15ನೇ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಕರೆದಿರುವ ಸಿದ್ದರಾಮಯ್ಯ ಇದರ ಜೊತೆ ಹಲವು ವಿಚಾರಗಳ ಕುರಿತು ಮುಖಂಡರ ಜೊತೆ ಸಮಾಲೋಚಿಸಿದರು. ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಶಾಸಕರು ಈಗಾಗಲೇ ರಾಜ್ಯಪಾಲರ ಭಾಷಣದ ಮೇಲೆ ಸುದೀರ್ಘ ಚರ್ಚೆ ನಡೆಸಿದ್ದು ಅದಕ್ಕೆ ಇನ್ನೂ ಸರ್ಕಾರ ಉತ್ತರ ನೀಡಿಲ್ಲ. ಮುಂದಿನ ಸೋಮವಾರದಿಂದ ಶುಕ್ರವಾರದವರೆಗೆ ಬಜೆಟ್ ಮೇಲಿನ ಚರ್ಚೆ ನಡೆಯಲಿದ್ದು ಕಡೆಯ ದಿನ ಅದು ಅನುಮೋದನೆ ಪಡೆಯಲಿದೆ.
ರಾಜ್ಯ ಸರ್ಕಾರ ಮುಂದಿನ ವಾರವಿಡೀ ಬಜೆಟ್ ಮೇಲಿನ ಚರ್ಚೆ ನಡೆಸದೆ ಆರಂಭದ ಮೂರು ದಿನಕ್ಕೆ ಚರ್ಚೆ ಮುಗಿಸಿ ಸಿಎಂ ಮೂಲಕ ಉತ್ತರ ಕೊಡಿಸಿ ಕಲಾಪವನ್ನ ಅನಿರ್ದಿಷ್ಟಾವಧಿಗೆ ಮುಂದೂಡುವ ಸಾಧ್ಯತೆ ಇದೆ. ಈ ಹಿನ್ನಲೆ ಸಿಗುವ ಕಡಿಮೆ ಅವಧಿಯಲ್ಲಿ ಪಕ್ಷದ ನಾಯಕರು ಸಮರ್ಥವಾಗಿ ಸರ್ಕಾರದ ಬಜೆಟ್ ಮೇಲೆ ಟೀಕೆ ಮಾಡಬೇಕು. ಯಾರ್ಯಾರು ಯಾವ್ಯಾವ ಕ್ಷೇತ್ರದ ಬಗ್ಗೆ ಮಾತನಾಡಬೇಕು ಹಾಗೂ ಯಾವ ವಿಚಾರವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಿ ಚರ್ಚಿಸಬೇಕು ಎಂಬ ಕುರಿತು ಇಂದಿನ ಶಾಸಕಾಂಗ ಸಭೆಯಲ್ಲಿ ವಿಸ್ತೃತವಾಗಿ ಸಮಲೋಚಿಸಲಾಗಿದೆ. ವಿಧಾನ ಮಂಡಲ ಉಭಯ ಸದನಗಳ ಅಧಿವೇಶನದಲ್ಲಿ ಬಜೆಟ್ ಅನುಮೋದನೆ ಪಡೆದ ಬಳಿಕ ಸದನದ ಹೊರಗೆ ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟವನ್ನು ಕೈಗೊಳ್ಳಬೇಕು ಎಂಬ ಕುರಿತು ಸಹ ಕಾಂಗ್ರೆಸ್ ನಾಯಕರು ಇಂದಿನ ಶಾಸಕಾಂಗ ಸಭೆಯಲ್ಲಿ ಚರ್ಚಿಸಿದ್ದಾರೆ.