ಕರ್ನಾಟಕ

karnataka

ETV Bharat / state

ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಕಾಂಗ್ರೆಸ್​ ಖಂಡನೆ, ಆಕ್ರೋಶ! - gelatin blast

ರಾಜ್ಯ ಸರ್ಕಾರ ಇಂತಹ ಘಟನೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ತಮ್ಮವರಿಂದಲೇ ಆಗುತ್ತಿರುವ ಗಣಿಗಾರಿಕೆ ಅಕ್ರಮ ತಡೆಯಲು ಸಹ ಹಿಂದೇಟು ಹಾಕುತ್ತಿದ್ದು, ಅಮಾಯಕರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದಾರೆ.

Congress leaders outraged over gelatin blast case of chickballapura
ಜಿಲೆಟಿನ್ ಸ್ಫೋಟ ಪ್ರಕರಣ ಖಂಡಿಸಿ ಕಾಂಗ್ರೆಸ್ ನಾಯಕರ ಆಕ್ರೋಶ!

By

Published : Feb 23, 2021, 3:29 PM IST

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಟಾಟಾ ಏಸ್ ವಾಹನದಲ್ಲಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟಗೊಂಡಿದ್ದು, ಆರು ಮಂದಿ ಸಾವನ್ನಪ್ಪಿರುವ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಟ್ವೀಟ್ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು, ಕಳೆದ ಒಂದು ತಿಂಗಳಲ್ಲಿ ಇಂತಹ ಎರಡನೇ ಪ್ರಕರಣ ಸಂಭವಿಸಿದೆ. ರಾಜ್ಯ ಸರ್ಕಾರ ಇಂತಹ ಘಟನೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ತಮ್ಮವರಿಂದಲೇ ಆಗುತ್ತಿರುವ ಗಣಿಗಾರಿಕೆ ಅಕ್ರಮ ತಡೆಯಲು ಸಹ ಹಿಂದೇಟು ಹಾಕುತ್ತಿದ್ದು, ಅಮಾಯಕರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ತನ್ನ ಟ್ವೀಟ್​​​ನಲ್ಲಿ, ಶಿವಮೊಗ್ಗದ ಸ್ಫೋಟದ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ, ಅಕ್ರಮ ಕಲ್ಲು ಕ್ವಾರಿಗಳಿಗೆ, ಅಕ್ರಮ ಸ್ಫೋಟಕಗಳಿಗೆ ಕಡಿವಾಣ ಹಾಕುವ ಬದಲು ಬೆಂಬಲವಾಗಿದ್ದರ ಪರಿಣಾಮ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಸಂಭವಿಸಿದೆ. ಶಿವಮೊಗ್ಗದಂತೆ ಇಲ್ಲೂ ಅಕ್ರಮಗಳ ಹಿಂದೆ ಬಿಜೆಪಿಗರೇ ಇದ್ದಾರೆ. ಈ ದುರಂತಕ್ಕೆ ಸಚಿವ ಸುಧಾಕರ್ ನೇರ ಹೊಣೆ ಎಂದಿದೆ.

ಡಿಕೆಶಿ ಟ್ವೀಟ್​:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದು, ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟದಲ್ಲಿ 6 ಅಮಾಯಕ ಜೀವಗಳ ಬಲಿಗೆ ರಾಜ್ಯ ಬಿಜೆಪಿ ಸರ್ಕಾರದ ಅಸಡ್ಡೆಯೇ ಕಾರಣ. ಒಂದೇ ತಿಂಗಳಿನಲ್ಲಿ ಎರಡನೇ ಬಾರಿ ಇಂತಹ ದುರ್ಘಟನೆ ನಡೆದಿದ್ದು, ಆಂತರಿಕ ಸಮಸ್ಯೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಮೈಮರೆತಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಸರಣಿ ಟ್ವೀಟ್:

ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅಮಾಯಕ ಕಾರ್ಮಿಕರ ದುರ್ಮರಣಕ್ಕೆ ಕಾರಣವಾದ ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟ ಆಘಾತಕಾರಿ ದುರ್ಘಟನೆ. ಮೃತರ ಆತ್ಮಕ್ಕೆ ಶಾಂತಿ ಕೋರುವೆ. ಪ್ರಕರಣದ ತನಿಖೆ ನಡೆಸುವುದರ ಜೊತೆಗೆ ನೊಂದ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸುವೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:ಕಲ್ಲುಕ್ವಾರಿ ಸ್ಫೋಟ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಒತ್ತಾಯ

ಶಿವಮೊಗ್ಗದ ಜಿಲೆಟಿನ್ ಸ್ಫೋಟ ಸಂಭವಿಸಿದ ತಿಂಗಳಲ್ಲೇ ನಡೆದ ಚಿಕ್ಕಬಳ್ಳಾಪುರ ಸ್ಫೋಟ ರಾಜ್ಯ ಸರ್ಕಾರದ ನಿಷ್ಕ್ರಿಯತೆ, ಬೇಜವಾಬ್ದಾರಿತನ ಮತ್ತು ಅಕ್ರಮದಲ್ಲಿ ಶಾಮೀಲಾಗಿರುವ ಭ್ರಷ್ಟತನಕ್ಕೆ ಸಾಕ್ಷಿ. ಮುಖ್ಯಮಂತ್ರಿ ಅವರೇ ನೀವು ಯಾರನ್ನು ರಕ್ಷಿಸುತ್ತಿದ್ದೀರಿ? ಜನರನ್ನೇ? ಭ್ರಷ್ಟರನ್ನೇ? ಚಿಕ್ಕಬಳ್ಳಾಪುರ ಕಲ್ಲು ಕ್ವಾರಿಯಲ್ಲಿ ಆರು ಮಂದಿ ಸಾವಿಗೀಡಾಗಿರುವುದು ಜಿಲೆಟಿನ್ ಸ್ಫೋಟದಿಂದ ಅಲ್ಲ. ಈ ಅಮಾಯಕ ಕಾರ್ಮಿಕರು, ಅಕ್ರಮ ಗಣಿಗಳನ್ನು ಸಕ್ರಮ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರಾಡಳಿತಕ್ಕೆ ಬಲಿಯಾಗಿದ್ದಾರೆ ಎಂದಿದ್ದಾರೆ.

ತನಿಖೆ ಆಗಲಿ:

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಮುಖ್ಯಮಂತ್ರಿಗಳು ಈ ತಕ್ಷಣ ಆದೇಶಿಸಬೇಕು. ಇದಕ್ಕಿಂತ ಮೊದಲು ಈ ಘಟನೆಗೆ ಕಾರಣರಾದ ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಅಮಾನತ್​​ನಲ್ಲಿಟ್ಟು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೂ ಆಂಧ್ರಪ್ರದೇಶದ ಗಣಿಲೂಟಿಕೋರರಿಗೂ ನೇರವಾದ ಸಂಬಂಧ ಇದೆ. ವಿಧಾನಸೌಧದಿಂದ ಜಿಲ್ಲಾಮಟ್ಟದವರೆಗೆ ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ. ಚಿಕ್ಕಬಳ್ಳಾಪುರದ ಈ ಅಕ್ರಮ ಗಣಿಗಾರಿಕೆ, ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಅವರ ಗಮನಕ್ಕೆ ಬಂದಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಅನಧಿಕೃತ ಕ್ರಷರ್, ಕ್ವಾರಿಗಳಿವೆ ಎಂದು ಹೇಳಲಾಗುತ್ತಿದೆ. ಇವುಗಳ ಪಟ್ಟಿಯನ್ನು ಮುಖ್ಯಮಂತ್ರಿಗಳು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚುವ ಕೆಲಸ ಶುರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಮೀರ್​​ ಟ್ವೀಟ್:

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಟ್ವೀಟ್ ಮಾಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಹಿರೇನಾಗವಲ್ಲಿಯ ಸ್ಟೋನ್ ಕ್ರಷರ್ನಲ್ಲಿ ಜಿಲೆಟಿನ್ ಸ್ಫೋಟಗೊಂಡು 6 ಮಂದಿ ಮೃತಪಟ್ಟಿರುವ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details