ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ಇಂದಿನಿಂದ ವಿದ್ಯುಕ್ತವಾಗಿ ಆರಂಭವಾಯಿತು. ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯ ಕುರಿತಾಗಿ ಪರ - ವಿರೋಧ ಚರ್ಚೆಗಳು, ಗದ್ದಲ, ಆರೋಪ ಪ್ರತ್ಯಾರೋಪ, ಧರಣಿ ನಡೆದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.
ಆಡಳಿತ ಪಕ್ಷದವರು ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯಕ್ಕೆ ಬೆಂಬಲ ಸೂಚಿಸಿದರೆ, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಕಲಾಪವನ್ನು ವಂದೇ ಮಾತರಂ ಮೂಲಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೈಗೆತ್ತಿಗೊಂಡರು. ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನೀವು ಯಾವ ನಿಯಮಗಳ ಅಡಿ ಚರ್ಚೆಗೆ ಕೈಗೆತ್ತಿಗೊಂಡಿದ್ದೀರಿ? ಇದಕ್ಕೆ ಸದನದ ನಿಯಮಗಳಲ್ಲಿ ಅವಕಾಶ ಇದೆಯೇ ? ಎಂದು ಪ್ರಶ್ನಿಸಿದರು.
ಹಿರಿಯ ಸದಸ್ಯ ಹೆಚ್.ಕೆ. ಪಾಟೀಲ್ ಮಾತನಾಡಿ ಕ್ರಿಯಾಲೋಪ (ಪಾಯಿಂಟ್ ಆಪ್ ಆರ್ಡರ್) ವಿಚಾರ ಎತ್ತಿದರು. ಇದರ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದರು.
ಕ್ರಿಯಾಲೋಪ ಬರುವುದಿಲ್ಲ ಎಂದ ಸ್ಪೀಕರ್, ಭಾಷಣದ ಪ್ರತಿ ಓದಲು ಆರಂಭಿಸಿದರು. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಭಾಷಣದ ಉದ್ದಕ್ಕೂ ಕಾಂಗ್ರೆಸ್ ಸದಸ್ಯರು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದರು.