ಕರ್ನಾಟಕ

karnataka

ETV Bharat / state

ನಳಿನ್ ಕುಮಾರ್ ಕಟೀಲ್​ಗೆ ತಲೆ ಕೆಟ್ಟಿದೆ ಆಸ್ಪತ್ರೆಗೆ ಸೇರಿಸಿ: ಕಾಂಗ್ರೆಸ್ ನಾಯಕರ ಆಕ್ರೋಶ

ರಾಹುಲ್ ಗಾಂಧಿ ವಿರುದ್ಧ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ​ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ ಜಿ ಪರಮೇಶ್ವರ್ ಸೇರಿದಂತೆ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್
ಕಾಂಗ್ರೆಸ್

By

Published : Oct 20, 2021, 9:05 AM IST

ಬೆಂಗಳೂರು: ಎಐಸಿಸಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವ ನಳಿನ್ ಕುಮಾರ್ ಕಟೀಲ್​ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರೊಬ್ಬ ಅವಿವೇಕಿ, ಅವರಿಗೆ ತಲೆ ಕೆಟ್ಟಿದೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, 'ನಮ್ಮ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಆಡಿದ ಮಾತುಗಳು ಅವರ ಅಸ್ವಸ್ಥ ಮನಸ್ಸಿನ ಪ್ರತೀಕ. ಈ ಹುಚ್ಚು ಸಾಂಕ್ರಾಮಿಕವಾಗುವ ಮೊದಲು ಅವರನ್ನು ಶೀಘ್ರ ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಲ್ಲಿ ಕೇಳಿಕೊಳ್ಳುತ್ತೇನೆ' ಎಂದಿದ್ದಾರೆ.

ಸಿದ್ದರಾಮಯ್ಯ ಟ್ವೀಟ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದು, ನಿನ್ನೆ ನಾನು ಮಾತನಾಡುವಾಗ "ರಾಜಕೀಯ ವಿರೋಧಿಗಳೊಡನೆ ನಾಗರಿಕ ಮೌಲ್ಯದ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳೋದ್ರಲ್ಲಿ ನಂಬಿಕೆಯಿದೆ" ಎಂದಿದ್ದೆ. ಬಿಜೆಪಿ ಇದನ್ನು ಒಪ್ಪುತ್ತದೆಂದು ಭಾವಿಸಿದ್ದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​ ಅವರು ರಾಹುಲ್ ಗಾಂಧಿಯವರನ್ನು ಅಸಂಸದೀಯ ಪದಗಳಿಂದ ನಿಂದಿಸಿದ್ದು, ಕ್ಷಮೆ ಯಾಚಿಸುತ್ತಾರೆಂದು ಭಾವಿಸುತ್ತೇನೆ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್ ಟ್ವೀಟ್

ಮಾಜಿ ಡಿಸಿಎಂ ಜಿ.ಪರಮೇಶ್ವರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಕಟೀಲ್ ಹೇಳಿಕೆಗೆ​ ಬೇಸರ ವ್ಯಕ್ತಪಡಿಸಿದ್ದಾರೆ.

ಕಟೀಲ್​ ಹೇಳಿದ್ದೇನು?

ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ ಮತ್ತು ಡ್ರಗ್ಸ್​ ಪೆಡ್ಲರ್ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಂದುವರಿದು ಇಂತವರು ದೇಶವನ್ನು ಹೇಗೆ ನಡೆಸುತ್ತಾರೆ ಎಂದು ಪ್ರಶ್ನಿಸಿದ್ದರು.

ಹೀಗಾಗಿ, ತಮ್ಮ ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಆಡಿರುವ ಮಾತು ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದ್ದು, ಬಹಿರಂಗವಾಗಿ ಕಟೀಲ್​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ABOUT THE AUTHOR

...view details