ಬೆಂಗಳೂರು:ನಗರದ ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ವಸಿಷ್ಠ ಸಹಕಾರ ಸಂಘದ ಅಕ್ರಮದ ತನಿಖೆಯ ಪ್ರಗತಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ವಿಧಾನ ಪರಿಷತ್ ಸದಸ್ಯ ಯುಬಿ ವೆಂಕಟೇಶ್, ಕೆಪಿಸಿಸಿ ವೈದ್ಯರ ಘಟಕದ ಅಧ್ಯಕ್ಷ ಡಾ ಶಂಕರ್ ಗುಹಾ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವಂತೆ ಒತ್ತಾಯಿಸಿದರು.
ಈ ಕುರಿತು ಡಾ ಶಂಕರ್ ಗುಹಾ ಮಾತನಾಡಿ, ನರಸಿಂಹ ಅಂತ ಒಬ್ಬರು ಇದ್ದಾರೆ. ಬ್ಯಾಂಕಿನಿಂದ 8 ರಿಂದ 10 ಕೋಟಿ ಹೋಗಿದೆ. ಆದರೆ ಇವರಿಗೆ ಹೋಗಿರುವುದು 50 ಕೋಟಿ. ಇನ್ನೊಬ್ಬರು ಸುರೇಶ್ ಅಂತ ಅವರ ಹಣ 108 ಕೋಟಿ. ಆದರೆ ಅವರಿಗೆ ಹೋಗಿರುವುದು 10 ಕೋಟಿ. ಹೆಬ್ಬುಲಿ ಸಿನಿಮಾ ಡೈರೆಕ್ಟರ್ 300 ಕೋಟಿ ಲೋನ್ ಪಡೆದಿದ್ದಾರೆ. ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ್ 12 ಕೋಟಿ ಲೋನ್ ಪಡೆದಿದ್ದಾರೆ. ಇವರೆಲ್ಲರ ಹೆಸರು ಸಿಬಿಐಗೆ ಹೋಗಿದೆ. ತೇಜಸ್ವಿ ಸೂರ್ಯ ಮಾತ್ರ ಇದರ ಬಗ್ಗೆ ಮಾತನಾಡಿದ್ದಾರೆ. ರವಿ ಸುಬ್ರಮಣ್ಯ ಕೂಡ ಮಾತನಾಡಿದ್ದಾರೆ. ಉಳಿದ ಯಾವ ನಾಯಕರು ಮಾತನಾಡಿಲ್ಲವೇಕೆ? ಸ್ವತಃ ಸಿಎಂ ಅವರೇ ಮಾತನಾಡಿಲ್ಲವೇಕೆ? ಎಂದು ಪ್ರಶ್ನಿಸಿದರು.
2 ವರ್ಷವಾದರೂ ಒಂದು ಪೈಸೆ ಬಂದಿಲ್ಲ :ವಸಿಷ್ಠ ಸಂಸ್ಥೆ, ಸ್ಥಳೀಯ ಶಾಸಕರಿಗೆ ಸಂಬಂಧವಿದೆ. ಶಾಸಕರೇ ಸಭೆಯಲ್ಲಿ ಹೇಳ್ತಾರೆ, ಹಣ ಎಲ್ಲೂ ಹೋಗಲ್ಲ ಬರುತ್ತೆ ಅಂತಾರೆ. ಅವರು ಹೇಳಿ 2 ವರ್ಷ ವಾದರೂ ಒಂದು ಪೈಸೆ ಬಂದಿಲ್ಲ. ಯಾರಿಗೆ ಕೊಟ್ರು, ಹೇಗೆ ಕೊಟ್ರು ಗೊತ್ತಿಲ್ಲ. ಯಾವ ಮಾನದಂಡದ ಮೇಲೆ ಕೊಟ್ರು. ಅದಕ್ಕೆ ದಾಖಲೆಗಳು ಬೇಕಲ್ಲ ಎಂದು ಕೇಳಿದರು. ರಾಘವೇಂದ್ರ ಜೊತೆ ಮತ್ತೊಂದು ಸಂಸ್ಥೆ ಸೇರಿದೆ. ಅದರಲ್ಲೂ ದೊಡ್ಡ ಹಗರಣ ನಡೆದಿದೆ. ಇದರ ಬಗ್ಗೆಯೂ ತೇಜಸ್ವಿ ಸೂರ್ಯ, ರವಿಸುಬ್ರಮಣ್ಯ ಮಾತನಾಡಿಲ್ಲ ಎಂದರು.
ಕಣ್ವ ಸಂಘದಿಂದ 2000 ಕೋಟಿ ಫ್ರಾಡ್ ಆಗಿದೆ. ಅದರ ಬಗ್ಗೆ ಇಲ್ಲಿಯವರೆಗೆ ಕ್ರಮ ತೇಗೆದುಕೊಂಡಿಲ್ಲ. ಕ್ಲೈಮ್ ಫಾರಂ ಕೊಡ್ತಿದ್ದಂತೆ ದುಡ್ಡು ವಾಪಸ್ ಬರಲ್ಲ. ಕ್ಲೈಮ್ ಕಮಿಟಿ ಕೊಟ್ಟಾಗ ಮಾತ್ರ ಅದು ಬರುತ್ತದೆ. ಇವತ್ತು ಹಣ ಹೂಡಿದವರ ಕಥೆ ಏನು? ವಸಿಷ್ಠ, ಗುರುರಾಘವೇಂದ್ರ ಬ್ಯಾಂಕ್ ಫ್ರಾಡ್ ಬಗ್ಗೆ ಶಾಸಕರೇ ತೆಗೆದುಕೊಳ್ಳಬೇಕು. ಫ್ರಾಡ್ ಆಗಿರುವ ಹಣವನ್ನ ಇನ್ವೆಸ್ಟ್ ಮಾಡಿದವರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಸಂಸದ ತೇಜಸ್ವಿ ಸೂರ್ಯ ಫ್ಲೈಟ್ ಡೋರ್ ಓಪನ್ ವಿಚಾರ :ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಳಿಬಂದಿರುವ ಫ್ಲೈಟ್ ಡೋರ್ ಓಪನ್ ವಿಚಾರ ಕುರಿತು ಮಾತನಾಡಿ, ಇದು ಮೂರು ಜನರ ನಾಲ್ಕು ಕಥೆಗಳು. ಯಾವ ಅಮಲಿನಲ್ಲಿ ಡೋರ್ ತೆಗೆದರೂ ಗೊತ್ತಿಲ್ಲ. ತೇಜಸ್ವಿ ಸೂರ್ಯ ಡೋರ್ ತೆಗೆದರಂತೆ. ನಂತರ ಎಲ್ಲ ಪ್ರಯಾಣಿಕರ ಬಳಿ ಹೋಗಿ ಕ್ಷಮೆ ಕೇಳಿದರಂತೆ. ಅಣ್ಣಾ ಮಲೈ ಡೋರ್ ಓಪನ್ ಆಗಿತ್ತಂತೆ. ಅದನ್ನ ಮುಚ್ಚೋಕೆ ಹೋದರಂತೆ. ಪಾಪ ಪ್ರಯಾಣಿಕರನ್ನು ರಕ್ಷಣೆ ಮಾಡಿದರಂತೆ. ಅವರ ಕೂದಲು, ಸ್ಯಾಂಪಲ್ ಪಡೆದು ತನಿಖೆ ಮಾಡಲಿ. ಆಗ ಯಾವ ಅಮಲು ಅಂತ ಗೊತ್ತಾಗುತ್ತದೆ. ಅವರಿಗೆ ಅದಕ್ಕೆ ಭಯವೇಕೆ? ನಮಗೇನೋ ಅವರ ಅಮಲಿನ ಬಗ್ಗೆ ಶಂಕೆಯಿದೆ. ಹಾಗಾಗಿ ತನಿಖೆ ಮಾಡಲಿ, ಗೊತ್ತಾಗುತ್ತೆ ಏನು ಅಂತ ಎಂದು ಶಂಕರ್ ಗುಹಾ ಗಂಭೀರ ಆರೋಪ ಮಾಡಿದರು.