ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆೆಗೆ ದೇಶದ ಬಹುಪಾಲು ಜನರು ಬೆಂಬಲ ಸೂಚಿಸಿ ತಮ್ಮ ಮನೆಯ ಮುಂದೆ ದೀಪ ಬೆಳಗಿಸಿ ಮಾರಕ ರೋಗದ ವಿರುದ್ಧ ಒಗ್ಗಟ್ಟು ಪ್ರದರ್ಶನ ತೋರಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರಿಂದ ಮಾತ್ರ ಯಾವುದೇ ಸಹಕಾರ ಸಿಗಲಿಲ್ಲ.
ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷ ಮನೆಯ ದ್ವಾರ, ತಾರಸಿ ಇಲ್ಲವೇ ಗ್ಯಾಲರಿಯಲ್ಲಿ ನಿಂತು ಟಾರ್ಚ್, ಬ್ಯಾಟರಿ, ಮೇಣದಬತ್ತಿ ಇಲ್ಲವೇ ದೀಪ ಬೆಳಗಿ ಕೊರೊನಾ ವಿರುದ್ಧ ದೇಶ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಎಂದು ರಾಷ್ಟ್ರದ ಜನತೆಯನ್ನು ಪ್ರಧಾನಿ ನರೇಂದ್ರ ಮೋದಿ ಕೋರಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ನಾಯಕರಾರು ಬೆಂಬಲ ಸೂಚಿಸಲಿಲ್ಲ.
ಮಾ.22 ರಂದು ಇಡೀ ರಾಷ್ಟ್ರವೇ ಜನತಾ ಕರ್ಫ್ಯೂ ಆಚರಿಸಿದ ಸಂದರ್ಭದಲ್ಲಿ ಸಂಜೆ ಐದು ಗಂಟೆಗೆ ಮನೆಯ ಬಾಗಿಲು ಇಲ್ಲವೇ ಗ್ಯಾಲರಿಯಲ್ಲಿ ನಿಂತು ಗಂಟೆ, ಜಾಗಟೆ ಬಾರಿಸಿ, ಶಂಖವನ್ನು ಊದಿ ಇಲ್ಲವೇ ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದರು. ಇದಕ್ಕೂ ಕೂಡ ಕಾಂಗ್ರೆಸ್ ನಾಯಕರಿಂದ ಬೆಂಬಲ ವ್ಯಕ್ತವಾಗಲಿಲ್ಲ. ಇದೀಗ ದೀಪಬೆಳಗುವ ಕಾರ್ಯಕ್ಕೂ ತಮ್ಮ ಅಸಹಕಾರವನ್ನು ಕಾಂಗ್ರೆಸ್ ನಾಯಕರು ತೋರಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ತಮ್ಮ ಬೆಂಗಳೂರು ನಿವಾಸದಲ್ಲಿಯೇ ಇದ್ದರು ಮೋದಿ ಕರೆಗೆ ಬೆಂಬಲಿಸಿದ್ದು ಕಂಡುಬಂದಿಲ್ಲ. ಇಡೀ ದೇಶವೇ ಮೋದಿ ಕರೆಗೆ ಬೆಂಬಲಿಸಿ ದೀಪ ಬೆಳಗಿದ್ದರೆ ಕಾಂಗ್ರೆಸ್ ನಾಯಕರು ಮಾತ್ರ ತಾವು ಪ್ರತಿಪಕ್ಷದವರಾಗಿ ಇದನ್ನು ಬೆಂಬಲಿಸುವುದು ಸರಿಯಲ್ಲ ಎನ್ನುವ ನಿಲುವನ್ನು ತಾಳಿದಂತೆ ಕಂಡುಬಂತು.
ವಿಶೇಷವೆಂದರೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಅವರ ಪುತ್ರ ಮಾಜಿ ಸಚಿವ ಹೆಚ್ಡಿ ರೇವಣ್ಣ ಪ್ರಧಾನಿಗಳಿಗೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ನಿವಾಸದಲ್ಲಿ ಮೋದಿ ಕರೆಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಪ್ರಧಾನಿ ಕರೆಯನ್ನು ಧಿಕ್ಕರಿಸಿದರೆ, ಇತ್ತ ರಾಜ್ಯ ಕಾಂಗ್ರೆಸ್ ನಾಯಕರು ಈ ಹಂತ ತಲುಪದೆ ತಮ್ಮ ಪಾಡಿಗೆ ತಾವು ಮನೆಯಲ್ಲಿದ್ದು ಮೋದಿ ಕರೆಯನ್ನು ಬೆಂಬಲಿಸದೆ ತಟಸ್ಥವಾಗಿ ಉಳಿದಿದ್ದಾರೆ.
ಒಟ್ಟಾರೆ ಪ್ರತಿಪಕ್ಷವಾಗಿ ರಾಷ್ಟ್ರೀಯ ಮಟ್ಟದಲ್ಲಿಯೂ ಕಾಂಗ್ರೆಸ್ ಪಕ್ಷ ಮೋದಿ ಕರೆಗೆ ಬೆಂಬಲ ಸೂಚಿಸಿಲ್ಲ. ಅದೇ ರೀತಿ ರಾಜ್ಯದಲ್ಲಿಯೂ ಕೈ ನಾಯಕರು ತಟಸ್ಥವಾಗಿ ಉಳಿದು ತಮ್ಮ ನಿಲುವು ಪ್ರದರ್ಶಿಸಿದ್ದಾರೆ.