ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ರಾಜ್ಯ ಶಾಸಕರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಶುರುವಿಟ್ಟುಕೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಸ್ಥಿತ್ವ ಉಳಿಸಿಕೊಂಡಿದ್ದರೆ ಅದಕ್ಕೆ ಸಿದ್ದರಾಮಯ್ಯ ಕಾರಣ, ಇವರ ನಾಯಕತ್ವದಲ್ಲಿ ತೆರಳಿದ ಕಾರಣಕ್ಕೆ ಎರಡು ಕ್ಷೇತ್ರಗಳನ್ನಾದರೂ ಗೆಲ್ಲಲು ಸಾಧ್ಯವಾಗಿದೆ. ಬಿಜೆಪಿಯ ಹಣ ಬಲದ ಮುಂದೆ ನಮ್ಮ ಅಭ್ಯರ್ಥಿಗಳು ಸೆಣಸಾಡಲಾಗದೇ ಸೋತಿದ್ದಾರೆ. ಇದು ಒಟ್ಟಾರೆ ಕಾಂಗ್ರೆಸ್ನ ಹಿನ್ನಡೆಯಾಗಿದೆ. ಅಲ್ಲದೇ ಜನ ಆಡಳಿತ ಪಕ್ಷಕ್ಕೆ ಮತ್ತೊಮ್ಮೆ ಮನ್ನಣೆ ನೀಡುವ ಕಾರ್ಯ ಮಾಡಿದ್ದಾರೆ, ಉಪಚುನಾವಣೆ 15 ಕ್ಷೇತ್ರಗಳ ಪೈಕಿ ಕೇವಲ ಎರಡು ಕ್ಷೇತ್ರ ಗೆದ್ದಿರುವುದು ಕಾಂಗ್ರೆಸ್ಗೆ ಎದುರಾಗಿರುವ ದೊಡ್ಡ ಹಿನ್ನಡೆ ಅಲ್ಲ. ಅಲ್ಲದೆ ಇದಕ್ಕೆ ಸಿದ್ದರಾಮಯ್ಯ ಒಬ್ಬರೇ ಹೊಣೆಗಾರರು ಅಲ್ಲ. ಇಡೀ ಪಕ್ಷ ಇದಕ್ಕೆ ಜವಾಬ್ದಾರ ವಾಗಿದ್ದು, ಸೋಲಿನ ಹೊಣೆಯನ್ನು ಕೇವಲ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರ ಹೆಗಲಿಗೆ ಹೊರಿಸುವುದು ಸರಿಯಾದ ಕ್ರಮ ಅಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವಂತೆ ಹೈಕಮಾಂಡ್ ಮಟ್ಟದಲ್ಲಿ ಶಾಸಕರು ಮನವಿ ಮಾಡುವ ಕಾರ್ಯ ಮಾಡಿದ್ದಾರೆ, ಎನ್ನಲಾಗಿದೆ.