ಕರ್ನಾಟಕ

karnataka

ETV Bharat / state

ಸಂಖ್ಯಾಬಲ ಮತ್ತಷ್ಟು ಕುಸಿತ ಆತಂಕದಲ್ಲಿ ಕೈ ನಾಯಕರು... ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ - Kannada news

ಆಪರೇಷನ್ ಕಮಲದಿಂದ ಕಾಂಗ್ರೆಸ್​ಗೆ ಸಾಕಷ್ಟು ಬಿಸಿ ತಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ 13 ರಾಜೀನಾಮೆ ನೀಡಿರುವ ಶಾಸಕರು ಸೇರಿದಂತೆ 16 ಶಾಸಕರ ಉಪಸ್ಥಿತಿಯ ಕೊರತೆಯನ್ನು ವಿಶ್ವಾಸಮತ ಸಾಬೀತು ಸಂದರ್ಭದಲ್ಲಿ ಮೈತ್ರಿ ಸರ್ಕಾರ ಎದುರಿಸಲಿದೆ

ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ

By

Published : Jul 18, 2019, 10:22 AM IST

ಬೆಂಗಳೂರು : ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ವಿಶ್ವಾಸಮತ ಮಂಡಿಸಲು ಮುಂದಾಗಿರುವ ಸಂದರ್ಭದಲ್ಲಿ ಒಬ್ಬೊಬ್ಬರೇ ಕಾಂಗ್ರೆಸ್ ಶಾಸಕರು ಕಣ್ಮರೆಯಾಗುತ್ತಿರುವುದು ಪಕ್ಷದಲ್ಲಿ ತೀವ್ರ ಆತಂಕ ಉಂಟುಮಾಡಿದೆ. ಈಗಾಗಲೇ 13 ಶಾಸಕರ ರಾಜೀನಾಮೆಯಿಂದ ಕಂಗಾಲಾಗಿರುವ ಕಾಂಗ್ರೆಸ್, ಕಳೆದ ರಾತ್ರಿ ಮತ್ತಿಬ್ಬರು ಶಾಸಕರು ಕೈ ಕೊಟ್ಟಿದ್ದು ಸಂಖ್ಯಾಬಲದಲ್ಲಿ ಗಣನೀಯ ಕೊರತೆ ಉಂಟಾಗುವ ಸಾಧ್ಯತೆಯನ್ನು ತೋರಿಸುತ್ತಿದೆ.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಗೂ ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ ಕಾಂಗ್ರೆಸ್ ರೆಸಾರ್ಟ್ ನಿಂದ ಹೊರ ಹೋಗಿರುವ ಮಾಹಿತಿ ಲಭಿಸಿದ್ದು, ಇವರ ಜೊತೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ನಾಗೇಂದ್ರ ಕೂಡ ಸದನಕ್ಕೆ ಆಗಮಿಸುವ ಸಾಧ್ಯತೆ ಕಡಿಮೆ ಇದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದಲ್ಲಿ ಆತಂಕ ಹೆಚ್ಚಾಗುತ್ತಿದೆ. ಶ್ರೀಮಂತ ಪಾಟೀಲ್ ತೆರಳುವುದನ್ನು ಕಾಂಗ್ರೆಸ್ ಪಕ್ಷದವರೇ ಒಪ್ಪಿಕೊಂಡಿದ್ದು, ವಿ ಮುನಿಯಪ್ಪ ಈಗಲೂ ತಮ್ಮೊಂದಿಗೆ ಇದ್ದಾರೆ ಎಂದು ವಿವರಿಸಿದ್ದಾರೆ. ಆದರೆ ಈ ಬಗ್ಗೆ ಮುನಿಯಪ್ಪ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳ ಪೈಕಿ ಆರಂಭದಲ್ಲಿ ನಡೆದ 222 ಹಾಗೂ ನಂತರ ನಡೆದ ಎರಡು ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 80 ಸ್ಥಾನವನ್ನು ಗೆದ್ದಿತ್ತು. ಆದರೆ ಕಳೆದ ಲೋಕಸಭೆ ಚುನಾವಣೆ ವೇಳೆಯಲ್ಲಿ ಉಮೇಶ್ ಜಾಧವ್ ರಾಜೀನಾಮೆ ಹಾಗೂ ಆ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜಾಧವ್ ಪುತ್ರನ ಗೆಲುವಿನಿಂದಾಗಿ ಕಾಂಗ್ರೆಸ್ ಸಂಖ್ಯಾಬಲ 79 ಕ್ಕೆ ಕುಸಿದಿತ್ತು. ಇದೀಗ ಪಕ್ಷಕ್ಕೆ ಅಧಿಕೃತವಾಗಿ 13 ಶಾಸಕರು ರಾಜೀನಾಮೆ ನೀಡಿದ್ದು ಸಂಖ್ಯಾಬಲ 66 ಕ್ಕೆ ಕುಸಿದಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಶ್ರೀಮಂತ ಪಾಟೀಲ್ ಹಾಗೂ ವಿ ಮುನಿಯಪ್ಪ ಇಬ್ಬರು ಸದನಕ್ಕೆ ಆಗಮಿಸುವುದು ಅನುಮಾನ ಎನ್ನಲಾಗುತ್ತಿದ್ದು, ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ನಾಗೇಂದ್ರ ಕೂಡ ಬರುವುದು ಅನುಮಾನ. ಹೀಗಾಗಿ ಕಾಂಗ್ರೆಸ್ ಸಂಖ್ಯಾಬಲ 63ಕ್ಕೆ ಕುಸಿಯುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ ಬಿಎಸ್ಪಿ ಶಾಸಕ ಎನ್ ಮಹೇಶ್ ಸೇರಿದಂತೆ 37 ಶಾಸಕರ ಬಲ ಹೊಂದಿರುವ ಜೆಡಿಎಸ್ ನಲ್ಲಿ ಮೂವರು ರಾಜೀನಾಮೆ ನೀಡಿದ್ದು ಜೆಡಿಎಸ್ ಸಂಖ್ಯಾಬಲ 34 ಆಗಿದೆ. ಈ ಹಿಂದೆ ಇದ್ದ ಅಂಕಿಅಂಶದ ಪ್ರಕಾರ ರಾಜಿನಾಮೆ ನೀಡಿರುವ ಶಾಸಕರನ್ನು ಹೊರತುಪಡಿಸಿ ಸದನದ ಸಂಖ್ಯಾಬಲ 208ಕ್ಕೆ ಕುಸಿದಿದೆ.

ಬಿಜೆಪಿ 105 ಶಾಸಕರನ್ನು ಹೊಂದಿದ್ದು ಕನಿಷ್ಠ ಬಹುಮತದ ಶಾಸಕರ ಬಲ ಹೊಂದಿದೆ. ಇದರ ಜೊತೆ ಇಬ್ಬರು ಪಕ್ಷೇತರರು ಇವರಿಗೆ ಬೆಂಬಲ ನೀಡಲಿದ್ದಾರೆ ಎಂಬ ಮಾಹಿತಿ ಇದ್ದ ಹಿನ್ನೆಲೆ, ಸಂಖ್ಯಾಬಲ ನೂರಕ್ಕೆ ಏರಿಕೆಯಾಗಿತ್ತು. ಆದರೆ ರಾಜೀನಾಮೆ ನೀಡಿದ್ದ ಶಾಸಕ ರಾಮಲಿಂಗರೆಡ್ಡಿ ಮರಳಿ ಕಾಂಗ್ರೆಸ್ ಪಾಳಯ ಸೇರುವುದಾಗಿ ತಿಳಿಸಿರುವ ಹಿನ್ನೆಲೆ ಬಲ 101 ತಲುಪುವ ನಿರೀಕ್ಷೆ ಹೊಂದಲಾಗಿತ್ತು. ಜೊತೆಗೆ ಪಕ್ಷೇತರ ಶಾಸಕ ಆರ್ ಶಂಕರ್ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲವಾದ ಹಿನ್ನೆಲೆ ಬಿಜೆಪಿಗೆ ಮತ್ತೊಂದು ಸಂಖ್ಯೆ ಕೊರತೆಯಾಗಿ ತಮಗೆ ಅನುಕೂಲವಾಗಲಿದೆ ಎಂದು ಮೈತ್ರಿ ನಾಯಕರು ಯೋಚಿಸಿದ್ದರು.

ಆದರೆ ಈ ನಡುವೆಯೇ ಸಂಖ್ಯಾಬಲದಲ್ಲಿ ಉಂಟಾದ ಏರಿಳಿತವನ್ನು ತಪ್ಪಿಸಲು ಬಿಜೆಪಿ, ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದು, ಮತ್ತಿಬ್ಬರು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದೆ ಎಂಬ ಮಾಹಿತಿ ಇದೆ. ಇದು ನಿಜವಾದ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಇನ್ನೂ ಮೂವರು ಶಾಸಕರ ಕೊರತೆ ಎದುರಾಗಲಿದೆ. ಅಲ್ಲಿಗೆ ಸದನದ ಸಂಖ್ಯಾಬಲ ಕೂಡ 205 ಕುಸಿಯಲಿದ್ದು, ಬಹುಮತ ಸಾಬೀತುಪಡಿಸಲು 103 ಸದಸ್ಯರ ಅಗತ್ಯ ಬರಲಿದೆ.

ಸದ್ಯ ಬಿಜೆಪಿ ಬಳಿ ಅಧಿಕೃತವಾಗಿ ಪಕ್ಷೇತರ ನಾಗೇಶ್ ಸೇರಿ 106 ಸದಸ್ಯರ ಬಲವಿದೆ. ಮೈತ್ರಿ ಸರ್ಕಾರಕ್ಕೆ ಮೂವರು ಶಾಸಕರು ಕೈಕೊಟ್ಟರೆ, ರಾಮಲಿಂಗಾ ರೆಡ್ಡಿ ಅವರನ್ನು ಕಾಂಗ್ರೆಸ್ ಪಾಳಯಕ್ಕೆ ಸೇರಿಸಿ ಲೆಕ್ಕ ಹಾಕಿದರೂ ಮೈತ್ರಿ ಪರ ಸಂಖ್ಯಾಬಲ 98ನ್ನು ತಲುಪಲಿದೆ. ಈ ಲೆಕ್ಕಾಚಾರದ ಮೇಲೆ ತಾವು ವಿಶ್ವಾಸಮತ ಗಳಿಸಬಹುದು ಎಂಬ ಆಶಯವನ್ನು ಬಿಜೆಪಿ ಕೂಡ ಹೊಂದಿದೆ. ಆಪರೇಷನ್ ಕಮಲದಿಂದ ಕಾಂಗ್ರೆಸ್​ಗೆ ಸಾಕಷ್ಟು ಬಿಸಿ ತಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ 13 ರಾಜೀನಾಮೆ ನೀಡಿರುವ ಶಾಸಕರು ಸೇರಿದಂತೆ 16 ಶಾಸಕರ ಉಪಸ್ಥಿತಿಯ ಕೊರತೆಯನ್ನು ವಿಶ್ವಾಸಮತ ಸಾಬೀತು ಸಂದರ್ಭದಲ್ಲಿ ಎದುರಿಸಲಿದೆ ಎಂಬ ಮಾಹಿತಿ ಲಭಿಸಿದೆ.

ABOUT THE AUTHOR

...view details