ಬೆಂಗಳೂರು: ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಆಪರೇಷನ್ ಹಸ್ತದ ಸನ್ನಿವೇಶವಿಲ್ಲ. ಯಾರೂ ಕೂಡ ಬಿಜೆಪಿ ತೊರೆಯಲ್ಲ, ಆದರೆ ಕಾಂಗ್ರೆಸ್ನ 40-45 ಪ್ರಮುಖ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಮುಖ್ಯ ವಕ್ತಾರ ಎಂ ಜಿ ಮಹೇಶ್ ಆಪರೇಷನ್ ಹಸ್ತಕ್ಕೆ ಪ್ರತಿಯಾಗಿ ರಿವರ್ಸ್ ಆಪರೇಷನ್ ಕುರಿತ ಸುಳಿವು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಆಪರೇಷನ್ ಹಸ್ತದ ಭ್ರಮೆ ಇದೆ. ಆದರೆ ನಾವ್ಯಾರು ಅದರಲ್ಲಿ ಬೀಳುವ ಅವಶ್ಯಕತೆ ಇಲ್ಲ, ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವ ಸುದ್ದಿಯ ಪ್ರಮಾಣದಲ್ಲಿ ಯಾವುದೇ ಪಕ್ಷಾಂತರದ ಚಟುವಟಿಕೆಗಳು ನಡೆಯುತ್ತಿಲ್ಲ. ಆದರೆ ಬಿಜೆಪಿಯನ್ನು ದುರ್ಬಲ ಮಾಡಲು ಕಾಂಗ್ರೆಸ್ ಹೊರಟಿರುವುದು ಆ ತಂತ್ರದ ಒಂದು ಭಾಗ. ಯಾರೂ ಕೂಡ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ಆ ರೀತಿಯ ಯಾವುದೇ ವಾತಾವರಣ ಇಲ್ಲ. ಆತಂಕವೂ ಇಲ್ಲ, ಇದರ ನಡುವೆ ಸಂತೋಷ್ ಅವರಂತಹ ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳನ್ನೇ ಅನೇಕ ಜನ ಕಾಂಗ್ರೆಸ್ಸಿಗರು ಸಂಪರ್ಕ ಮಾಡಿರುವುದನ್ನು ಸ್ವತಃ ಸಂತೋಷ್ ಅವರು ಇಂದಿನ ಸಭೆಯಲ್ಲೇ ಉಲ್ಲೇಖಿಸಿದ್ದಾರೆ. 40-45 ಪ್ರಮುಖ ನಾಯಕರು ಸಂಪರ್ಕ ಮಾಡಿದ್ದನ್ನು ಉಲ್ಲೇಖ ಮಾಡಿದ್ದಾರೆ ಎಂದು ರಿವರ್ಸ್ ಆಪರೇಷನ್ ಸುಳಿವು ನೀಡಿದರು.
ಸಂತೋಷ್ ಅವರು ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದಲ್ಲಿ ಎಡಪಂಥೀಯರ ಪ್ರೇರಣೆ ಮೇಲೆ ನಡೆಯುತ್ತಿರುವ ಸರ್ಕಾರವಿದೆ. ಆ ಸರ್ಕಾರದ ಅನೇಕ ತಪ್ಪು ಅಭಿಪ್ರಾಯಗಳನ್ನು ಬಿತ್ತರಿಸಲಾಗುತ್ತಿದೆ. ಅವರ ಷಡ್ಯಂತ್ರಕ್ಕೆ ಬಿಜೆಪಿಯ ಯಾರೂ ಒಳಗಾಗಬಾರದು. ಪಕ್ಷಾಂತರದ ವಿಚಾರ ಸೇರಿದಂತೆ ಎಲ್ಲ ವಿಚಾರದಲ್ಲೂ ಕಾರ್ಯಕರ್ತರು ಒಂದಾಗಿ ಒಂದೇ ದೃಢ ನಿಶ್ಚಯದಿಂದ ಇಂದು ಬಂದಿರುವ ಸವಾಲು ಎದುರಿಸಬೇಕು. ಮತ್ತೊಮ್ಮೆ ಬಿಜೆಪಿಯನ್ನು ಲೋಕಸಭಾ ಮತ್ತು ಮುಂದಿನ ಚುನಾವಣೆಗಳಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರೇರಣಾದಾಯಕ ಮಾತುಗಳನ್ನ ಹೇಳಿದ್ದಾರೆ ಎಂದರು.