ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪದಾಧಿಕಾರಿಗಳಿಗೆ ಕೈ ನಾಯಕರಿಂದ ಹೊಸ ಟಾಸ್ಕ್: ಏನಿದು ಹೊಸ ಗುರಿ?

ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ- ಪದಾಧಿಕಾರಿಗಳಿಗೆ ಕೈ ನಾಯಕರಿಂದ ಹೊಸ ಟಾಸ್ಕ್​- 'ಕಾಂಗ್ರೆಸ್​ ಗ್ಯಾರಂಟಿ' ಬಗ್ಗೆ ಪ್ರಚಾರಕ್ಕೆ ಸೂಚನೆ

congress
ಕಾಂಗ್ರೆಸ್ ನಾಯಕರ ಸಭೆ

By

Published : Jan 28, 2023, 1:08 PM IST

ಬೆಂಗಳೂರು: ಕಾಂಗ್ರೆಸ್ ಸಭೆಯಲ್ಲಿ ಪದಾಧಿಕಾರಿಗಳಿಗೆ ಕೈ ಹಿರಿಯ ನಾಯಕರು ಹೊಸ ಟಾಸ್ಕ್ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಗರದಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಈ ಹೊಸ ಗುರಿಗಳನ್ನು ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ವವ್ಯಾಪಿ ಪ್ರಚಾರ ಚಟುವಟಿಕೆಯ ಟಾಸ್ಕ್ ಪಡೆದಿರುವ ಕೈ ನಾಯಕರು ಅದನ್ನು ಚಾಚು ತಪ್ಪದೇ ಪಾಲಿಸುವಂತೆ ಪಕ್ಷದ ಜಿಲ್ಲಾ, ತಾಲೂಕು ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಲಾಗಿದೆ.

ಏನಿದು ಹೊಸ ಟಾಸ್ಕ್..?​: ಕ್ಷೇತ್ರದಲ್ಲಿ ಜನದಟ್ಟಣೆಯಿರುವ ಭಾಗಗಳಲ್ಲಿ ಕಾಂಗ್ರೆಸ್‌ನ ಪ್ರಮುಖ ಭರವಸೆ, ಘೋಷಣೆ ಮತ್ತು ಪ್ರಣಾಳಿಕೆ ಕುರಿತು ವರ್ಣ ಚಿತ್ರಗಳನ್ನು ರಚಿಸುವ ಮೂಲಕ ಪ್ರಚಾರ ಮಾಡಬೇಕು. ಪ್ರತಿ ಕ್ಷೇತ್ರಕ್ಕೆ ಇಂತಹ 500 ಕಡೆ ಪ್ರಚಾರ ಕಡ್ಡಾಯವಾಗಿರಬೇಕು. ಹೆಚ್ಚಿನ ಪ್ರಚಾರ ನೀಡುವ ದೃಷ್ಟಿಯಿಂದ ಜನದಟ್ಟಣೆಯಿರುವ ಪ್ರದೇಶಗಳಲೆಲ್ಲಾ ಫ್ಲೆಕ್ಸ್​ಗಳನ್ನು ಅಳವಡಿಸಬೇಕು. 2 ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 300 ಫ್ಲೆಕ್ಸ್ ಅಳವಡಿಕೆ ಮಾಡಬೇಕು. ಕ್ಷೇತ್ರದಾದ್ಯಂತ ಕಾಂಗ್ರೆಸ್ ಭರವಸೆಗಳ ಕುರಿತಾದ ಸಂದೇಶಗಳು ಜನರಿಗೆ ಆಳವಾಗಿ ಮನಮುಟ್ಟುವಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಭಿತ್ತಿ ಚಿತ್ರಗಳನ್ನು ಅಳವಡಿಸಬೇಕು.

ಗ್ರಾಮ ಮಟ್ಟದಲ್ಲಿ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಪಕ್ಷದ ಸ್ಟಿಕ್ಕ‌ರ್​ಗಳನ್ನು ವಾಹನಗಳ ಮೇಲೆ ಅಂಟಿಸಿಕೊಳ್ಳಬೇಕು. ಆಕಾಂಕ್ಷಿಗಳು ಅಥವಾ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ವಾಹನಗಳ ಮೇಲೆ ಈ ಸ್ಟಿಕ್ಕರ್​ಗಳು ಇರುವಂತೆ ನೋಡಿಕೊಳ್ಳಬೇಕು ಮತ್ತು ಕ್ಷೇತ್ರದ ನಾಯಕರು ಕಡ್ಡಾಯವಾಗಿ ಹಾಕಿರಲೇಬೇಕು. ಆಟೋಗಳ ಮೂಲಕ ಪಕ್ಷದ ಪ್ರಮುಖ ಭರವಸೆಗಳು, ಲೋಗೋ, ನಾಯಕರ ಭಾವಚಿತ್ರ ಹಾಗೂ ಪ್ರಣಾಳಿಕೆಗಳನ್ನು ಪ್ರಚಾರ ಮಾಡಬೇಕು. ಇದಕ್ಕಾಗಿ ಆಟೋ ಚಾಲಕರಿಗೆ ನೇರವಾಗಿ ಅಥವಾ ಸ್ಥಳೀಯ ಆಟೋ ಚಾಲಕರ ಒಕ್ಕೂಟದ ಮೂಲಕ ಪ್ರಚಾರ ಸಾಮಾಗ್ರಿಗಳನ್ನು ನೀಡಬೇಕು. ಅಲ್ಲದೇ ಆಟೋಗಳಲ್ಲಿ ಮೈಕ್ ಮೂಲಕ ಕಾಂಗ್ರೆಸ್ ಭರವಸೆಗಳ ಕುರಿತು ಸಂದೇಶಗಳನ್ನು ಘೋಷಿಸಬೇಕು. ಈ ಚಟುವಟಿಕೆಗಳ ನೇತೃತ್ವವನ್ನು ಸ್ಥಳೀಯ ಆಕಾಂಕ್ಷಿಗಳು, ಅಭ್ಯರ್ಥಿಗಳು ಅಥವಾ ಜಿಲ್ಲಾ ಕಾಂಗ್ರೆಸ್‌ ಸಮಿತಿ ವಹಿಸಿಕೊಳ್ಳಬೇಕು.

ಸ್ತ್ರೀ ಸ್ವಸಹಾಯ ಸಂಘ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಕಾಂಗ್ರೆಸ್‌ ಭರವಸೆಗಳನ್ನು ತಿಳಿಸಬೇಕು. ಅವರಿಗೆ ಕರಪತ್ರಗಳು, ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಬೇಕು. ಇದಕ್ಕಾಗಿಯೇ ಪ್ರತಿದಿನ 10 ಸಭೆಗಳನ್ನು ಆಯೋಜಿಸಬೇಕು. ಗ್ರಾಮ ಮಟ್ಟದಲ್ಲಿ ಡಂಗೂರದ ಮೂಲಕ ಪಕ್ಷದ ಭರವಸೆಗಳು, ಘೋಷಣೆಗಳನ್ನು ಜನರಿಗೆ ತಲುಪಿಸಬೇಕು. ಕಾಂಗ್ರೆಸ್‌ ಗ್ಯಾರಂಟಿ, ಭರವಸೆ ಹಾಗೂ ಅದರ ಪ್ರಾಮುಖ್ಯತೆಗಳ ಬಗ್ಗೆ ಬೀದಿ ನಾಟಕ ಪ್ರದರ್ಶನ ಮಾಡಬೇಕು. ಕ್ಷೇತ್ರದ ಪ್ರತಿ ಬ್ಲಾಕ್, ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶನವನ್ನು ಏರ್ಪಡಿಸಬೇಕು. ಪ್ರತಿ ದಿನ 3 ಪ್ರದರ್ಶನದಂತೆ 45 ದಿನ ಏರ್ಪಡಿಸಬೇಕು ಎಂದು ಕೈ ನಾಯಕರು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಟಾಸ್ಕ್​ ನೀಡಿದ್ದಾರೆ.

ಇದನ್ನೂ ಓದಿ:’’ದೇವೇಗೌಡರು ಪ್ರಧಾನಿಯಾಗಿ ಜನರ ಮನ ಗೆಲ್ಲಲಿಲ್ಲ‘‘.. ಡಿಕೆಶಿ ಹೇಳಿಕೆಗೆ ಜೆಡಿಎಸ್ ಕೆಂಡಾಮಂಡಲ

ಕಾಂಗ್ರೆಸ್‌ ಪಕ್ಷ ಎರಡು ಮಹತ್ವದ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಅದರ ವಿಶೇಷ ಪ್ರಚಾರಕ್ಕೆ ನೀಲ ನಕ್ಷೆ ಸಿದ್ದಪಡಿಸಿ ಕೈ ನಾಯಕರು ನೀಡಿದ್ದಾರೆ. ಗೃಹ ಜ್ಯೋತಿ ಯೋಜನೆಯ ಮೂಲಕ ಕರ್ನಾಟಕದ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಗೃಹ ಲಕ್ಷ್ಮಿ ಯೋಜನೆಯಂತೆ ಕರ್ನಾಟಕದ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲಾಗುವುದು. ಕಾಂಗ್ರೆಸ್‌ ಘೋಷಣೆ ಮಾಡಿರುವ ಈ ಎರಡು ಗ್ಯಾರಂಟಿ ಯೋಜನೆಗಳ ಬಗ್ಗೆ ಕರ್ನಾಟಕದ ಜನತೆಗೆ ತಿಳಿಸಲು, ವಿಶ್ವಾಸಾರ್ಹತೆ ಮೂಡಿಸಲು ಹಾಗೂ ಪ್ರತಿ ಮನೆಯ ಸದಸ್ಯರನ್ನು ನೋಂದಣಿ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು, ಅಕಾಂಕ್ಷಿಗಳು, ಬ್ಲಾಕ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ವಿಶೇಷ ಟಾಸ್ಕ್ ಕೂಡ ನೀಡಲಾಗಿದೆ.

'ಕಾಂಗ್ರೆಸ್​ ಗ್ಯಾರಂಟಿ' ಬಗ್ಗೆ ಪ್ರಚಾರ: ಪ್ರತಿ ಗ್ರಾಮ ಮತ್ತು ವಾರ್ಡ್‌ಗಳಲ್ಲಿ ಪ್ರತಿದಿನ ಕನಿಷ್ಠ ಎರಡು ಸಭೆ ನಡೆಸಿ, ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡಬೇಕು. ಎಲ್ಲೆಡೆ ಕರಪತ್ರ ಹಂಚುವ ಮುಖಾಂತರ ಬಿಜೆಪಿಯ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು. ಎಸ್​.ಸಿ.ಎಸ್​.ಟಿ ಸೇರಿದಂತೆ ಗ್ರಾಮದ ಎಲ್ಲಾ ಮನೆಗಳಿಗೂ ಭೇಟಿ ನೀಡಬೇಕು. ಸ್ಥಳೀಯ ಪ್ರಭಾವಿ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಪ್ರತಿ ಮನೆಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿ ಭರವಸೆ ಈಡೇರಿಸುವ ಗ್ಯಾರಂಟಿ ನೀಡಬೇಕು. ಎಲ್ಲ ಪ್ರತಿಕ್ರಿಯೆ ಪ್ರತಿಗಳನ್ನು ಸಂಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತಲುಪಿಸಬೇಕು. ಪ್ರತಿ 10 ಬೂತ್​ಗೆ ಒಂದು ನೋಂದಣಿ ಕೇಂದ್ರ ಸ್ಥಾಪಿಸಬೇಕು. (ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಅಂದಾಜು 26 ನೋಂದಣಿ ಕೇಂದ್ರ) ಪ್ರತಿ ಕೇಂದ್ರದಲ್ಲಿ ಒಬ್ಬರನ್ನು ನಿಯೋಜಿಸಿ ನೋಂದಣಿ ಮಾಡಿಸಬೇಕು ಎಂಬ ಪ್ರಚಾರದ ಟಾಸ್ಕ್​ನ್ನು ಪಕ್ಷದ ನಾಯಕರಿಗೆ ನೀಡಲಾಗಿದೆ.

ಸುರ್ಜೇವಾಲಾ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದರು. ಫೆಬ್ರವರಿ 2ರಿಂದ 10ರ ಒಳಗಾಗಿ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಬೇಕು. ಪಕ್ಷದ ಭರವಸೆ ಜನರಿಗೆ ಮುಟ್ಟಿಸಬೇಕು. ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಯ ಬಗ್ಗೆ ವಿವರಿಸಬೇಕು. ಪ್ರತಿ ಮನೆಯ ಸದಸ್ಯರನ್ನು ಮುಖಂಡರು ತಲುಪಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಕರ್ನಾಟಕವನ್ನು ಎಟಿಎಂ ಮಾಡಲು ಕಾಂಗ್ರೆಸ್ ಹೊರಟಿದೆ: ಕೈ ವಿರುದ್ಧ ಬಿಜೆಪಿ ವಾಗ್ದಳಿ

ABOUT THE AUTHOR

...view details