ಕರ್ನಾಟಕ

karnataka

ETV Bharat / state

ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ಗ್ಯಾರಂಟಿಗಳೇ ಕೇಂದ್ರ ಬಿಂದು: ರಾಜ್ಯದ ಕೈ ನಾಯಕರ ದಂಡು ತೆಲಂಗಾಣದಲ್ಲಿ ಮೊಕ್ಕಾಂ! - ಬಿಆರ್​ಎಸ್ ಹಾಗೂ ಕಾಂಗ್ರೆಸ್

ತೆಲಂಗಾಣ ಚುನಾವಣೆಗೆ ರಾಜ್ಯದ​ 10 ಸಚಿವರುಗಳು ಹಾಗೂ 48 ಶಾಸಕರುಗಳಿಗೆ ಕ್ಷೇತ್ರವಾರು ಹೊಣೆಗಾರಿಕೆ ನೀಡಲಾಗಿದ್ದು, ಎಲ್ಲರೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

Etv Bharatcongress-leaders-doing-furious-campaign-in-telangana-election
ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ಗ್ಯಾರಂಟಿಗಳೇ ಕೇಂದ್ರ ಬಿಂದು: ರಾಜ್ಯದ ಕೈ ನಾಯಕರ ದಂಡು ತೆಲಂಗಾಣದಲ್ಲೇ ಮೊಕ್ಕಾಂ!

By ETV Bharat Karnataka Team

Published : Nov 13, 2023, 9:12 PM IST

Updated : Nov 13, 2023, 11:03 PM IST

ಬೆಂಗಳೂರು: ತೆಲಂಗಾಣ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.‌ ರಾಜ್ಯ ಚುನಾವಣಾ ಮಾದರಿಯನ್ನೇ ತೆಲಂಗಾಣದಲ್ಲಿ ಕಾಂಗ್ರೆಸ್ ಅಳವಡಿಸಿಕೊಂಡಿದೆ. ರಾಜ್ಯ ಸಿಎಂ, ಡಿಸಿಎಂ ಸೇರಿ ಸಚಿವರುಗಳು, ಕೈ ಶಾಸಕರ ದಂಡೇ ತೆಲಂಗಾಣ ಅಖಾಡಕ್ಕಿಳಿದಿದೆ. ಆ ಮೂಲಕ ಕರ್ನಾಟಕದ ಭರ್ಜರಿ ಜಯಭೇರಿಯನ್ನು ತೆಲಂಗಾಣದಲ್ಲೂ ಪುನರಾವರ್ತಿಸಲು ಮುಂದಾಗಿದೆ.

ತೆಲಂಗಾಣದ ಚುನಾವಣ ಅಖಾಡ ರಂಗೇರಿದೆ. ಆಡಳಿತಾರೂಢ ಬಿಆರ್​ಎಸ್ ಹ್ಯಾಟ್ರಿಕ್ ಗೆಲುವಿಗೆ ಹೋರಾಟ ನಡೆಸಿದರೆ, ಕಾಂಗ್ರೆಸ್ ಮೊದಲ ಬಾರಿಗೆ ತೆಲಂಗಾಣದ ಗದ್ದುಗೆ ಹಿಡಿಯಲು ತನ್ನ ಎಲ್ಲ ಕಾರ್ಯತಂತ್ರ, ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಇತ್ತ ಬಿಜೆಪಿಯೂ ಜಿದ್ದಾಜಿದ್ದಿನ ಸ್ಪರ್ಧೆ ನೀಡಲು ಕಸರತ್ತು ನಡೆಸುತ್ತಿದೆ. ಬಿಆರ್​ಎಸ್ ಮುಖ್ಯಸ್ಥ ಕೆಸಿಆರ್ ಸರ್ಕಾರದ ವಿರುದ್ಧ ಆಡಳಿತಾರೂಢ ಅಲೆ ಇದ್ದು, ಅದರ ಉಪಯೋಗ ಪಡೆಯಲು ಕಾಂಗ್ರೆಸ್ ಬಿರುಸಿನ‌ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.

ತೆಲಂಗಾಣ ಕಾಂಗ್ರೆಸ್​ ನಾಯಕರ ಜೊತೆ ಸಿಎಂ ಸಿದ್ದರಾಮಯ್ಯ

ಚುನಾವಣಾ ಸಮೀಕ್ಷೆಯನ್ನು ನಂಬುವುದಾದರೆ ತೆಲಂಗಾಣದಲ್ಲಿ ಈ ಬಾರಿ ಬಿಆರ್​ಎಸ್ ಹಾಗೂ ಕಾಂಗ್ರೆಸ್ ‌ಮಧ್ಯೆ ಜಿದ್ದಾಜಿದ್ದು ಏರ್ಪಟ್ಟಿದೆ. ಬಿಆರ್​ಎಸ್ ಗೆ ಕೌಂಟರ್ ಕೊಡಲು ಕಾಂಗ್ರೆಸ್ ತೆಲಂಗಾಣದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಮೊರೆ ಹೋಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಆರು ಗ್ಯಾರಂಟಿಗಳನ್ನು ಘೋಷಿಸಿ ಮತಬೇಟೆಗೆ ಇಳಿದಿದೆ. ಅದಕ್ಕಾಗಿನೇ ಕಾಂಗ್ರೆಸ್ ರಾಜ್ಯದ ಕೈ ನಾಯಕರ ದಂಡನ್ನೇ ತೆಲಂಗಾಣಕ್ಕೆ ಕಳುಹಿಸಿದೆ. ರಾಜ್ಯ ಕಾಂಗ್ರೆಸ್​ನ ಅತಿರಥ ಮಹಾರಥ ನಾಯಕರೇ ತೆಲಂಗಾಣದ ಚುನಾವಣಾ ರಣಕಣದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸಿಎಂ, ಡಿಸಿಎಂರಿಂದ ತೆಲಂಗಾಣದಲ್ಲಿ ಮತಬೇಟೆ:ತೆಲಂಗಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ‌.ಕೆ.ಶಿವಕುಮಾರ್ ತೆಲಂಗಾಣದಲ್ಲಿ ಬಿರುಸಿನ ಮತಬೇಟೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಮುಖರಾಗಿದ್ದಾರೆ.‌ ಪಕ್ಷ ಸಂಘಟನೆ ಹಾಗೂ ಪಂಚ ಗ್ಯಾರಂಟಿಗಳನ್ನು ಜನಮನ ಮುಟ್ಟುವಂತೆ ಮಾಡಿದ್ದರು. ಅದೇ ಮಾದರಿಯ ಚುನಾವಣಾ ರಣನೀತಿಯನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಕಾರ್ಯರೂಪಕ್ಕೆ ತರುತ್ತಿದೆ.

ಕಾಂಗ್ರೆಸ್​ ಹಿಂದುಳಿದ ವರ್ಗಗಳ ನಿರ್ಣಯ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ

ಎಐಸಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತೆಲಂಗಾಣದಲ್ಲಿ ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯದ ಬಡವರು, ಮಧ್ಯಮ ವರ್ಗ ಬೆಲೆ ಏರಿಕೆಯ ಸಂಕಷ್ಟದಿಂದ ಹೊರ ಬರುತ್ತಿದ್ದಾರೆ ಎಂಬ ಬಗ್ಗೆ ತೆಲಂಗಾಣ ಜನರ ಮನವೊಲಿಕೆ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ನಾವು ಐದು ಗ್ಯಾರಂಟಿಗಳನ್ನು 100 ದಿನಗಳಲ್ಲಿ ಜಾರಿ ಮಾಡಿದ್ದೇವೆ. ತೆಲಂಗಾಣದಲ್ಲೂ ಒಂದು ಬೋನಸ್ ಸೇರಿ ಆರು ಗ್ಯಾರಂಟಿಗಳು 100 ದಿನಗಳಲ್ಲಿ ಜಾರಿ ಆಗುತ್ತವೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ "ಹಿಂದುಳಿದ ವರ್ಗಗಳ ನಿರ್ಣಯ" ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದರು.

ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ತೆಲಂಗಾಣದ ವಿವಿಧ ಜಿಲ್ಲೆಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಕ್ರಿಯವಾಗಿ ತೆಲಂಗಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ರಾಜ್ಯದಲ್ಲಿನ ಪಂಚ ಗ್ಯಾರಂಟಿಗಳ ಜಾರಿ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ.

ಹಿಂದುಳಿದ ವರ್ಗಗಳ ನಿರ್ಣಯ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ

ರಾಜ್ಯದ ಸಚಿವರುಗಳು, ಶಾಕರಿಗೆ ತೆಲಂಗಾಣ ಜವಾಬ್ದಾರಿ:ಇತ್ತ ರಾಜ್ಯದ 10 ಸಚಿವರುಗಳು ಹಾಗೂ 48 ಕೈ ಶಾಸಕರುಗಳಿಗೆ ಕ್ಷೇತ್ರವಾರು ಹೊಣೆಗಾರಿಕೆ ನೀಡಲಾಗಿದೆ‌. ಆ ಮೂಲಕ ರಾಜ್ಯದಲ್ಲಿನ ಚುನಾವಣಾ ಯಶಸ್ಸನ್ನು ತೆಲಂಗಾಣದಲ್ಲೂ ಪುನರಾವರ್ತನೆ ಮಾಡಲು ಕಸರತ್ತು ನಡೆಸುತ್ತಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯ ಎಐಸಿಸಿ ಕ್ಲಸ್ಟರ್ ಉಸ್ತುವಾರಿಗಳಾಗಿ ಸಚಿವರಾದ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಪ್ರಿಯಾಂಕ ಖರ್ಗೆ, ಎಂ.ಸಿ.ಸುಧಾಕರ್, ಶರಣ್ ಪ್ರಕಾಶ್ ಪಾಟೀಲ್, ಕೆ.ಹೆಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಜಮೀರ್ ಅಹಮ್ಮದ್ ಖಾನ್, ಶಿವರಾಜ್ ತಂಗಡಗಿ, ಬಿ.ನಾಗೇಂದ್ರರನ್ನು ನೇಮಿಸಲಾಗಿದೆ.

ಇನ್ನು ಕ್ಷೇತ್ರವಾರು ಅಬ್ಸರ್ವರ್ ಆಗಿ 48 ಕಾಂಗ್ರೆಸ್ ಶಾಸಕರನ್ನು ನೇಮಿಸಿದೆ. ಇದರಲ್ಲಿ ಎಂಎಲ್‌ಸಿ ಉಮಾಶ್ರೀ, ಮಹಂತೇಶ್ ಕೌಜಲಗಿ, ಸಲೀಂ ಅಹಮ್ಮದ್, ಅನಿಲ್ ಚಿಕ್ಕಮಾಧು, ಯು.ಬಿ.ವೆಂಕಟೇಶ್, ಕೋನಾರೆಡ್ಡಿ, ಪ್ರಕಾಶ್ ಹುಕ್ಕೇರಿ, ಸುಧಾಂ ದಾಸ್, ಯು.ಬಿ.ಬಣಕಾರ್, ವಿನಯ್ ಕುಲಕರ್ಣಿ, ಪ್ರದೀಪ್ ಈಶ್ವರ್, ನಾರಾಯಣ ಸ್ವಾಮಿ, ಶಿವಣ್ಣ, ಎಂ.ಆರ್.ಸೀತಾರಾಮ್, ಬಸವರಾಜ ರಾಯರೆಡ್ಡಿ, ಕಂಪ್ಲಿ ಗಣೇಶ್ ಸೇರಿದಂತೆ ಒಟ್ಟು 48 ಶಾಸಕರಿಗೆ ವಿಧಾನಸಭೆ ಕ್ಷೇತ್ರಗಳ ಅಬ್ಸರ್ವರ್ ಆಗಿ ನೇಮಕ ಮಾಡಿದೆ . ಎಲ್ಲರೂ ತೆಲಂಗಾಣ ರಾಜ್ಯದ ಅದರಲ್ಲೂ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮೊಕ್ಕಾಂ‌ ಹೂಡಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ‌.

ಇದನ್ನೂ ಓದಿ:ತೆಲಂಗಾಣದಲ್ಲಿ ಬಿಆರ್‌ಎಸ್, ಬಿಎಸ್‌ಪಿ ಕಾರ್ಯಕರ್ತರ ಘರ್ಷಣೆ

Last Updated : Nov 13, 2023, 11:03 PM IST

ABOUT THE AUTHOR

...view details