ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವನ್ನು ಕಾಂಗ್ರೆಸ್ ನಾಯಕರಾದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನಸಭೆ ಉಪನಾಯಕ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟೀಕಿಸಿದ್ದಾರೆ.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜ್ಯ ಸರ್ಕಾರದ ಕ್ಯಾಬಿನೆಟ್ನಲ್ಲಿ ಅನುಮೋದನೆ ಪಡೆದ ಬಳಿಕ ಆ ಭಾಷಣದ ಪ್ರತಿಯನ್ನು ರಾಜ್ಯಪಾಲರ ಮೂಲಕ ಇಂದು ಓದಿಸಲಾಗಿದೆ. ಸರ್ಕಾರ ತನ್ನ ಸುಳ್ಳುಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಹೇಳಿಸಿರುವುದು ರಾಜ್ಯದ ದುರಂತ. ಇಂದಿನ ಭಾಷಣ ಕೇಳಿದ ಬಳಿಕ ಸರ್ಕಾರಕ್ಕೆ ರಾಜ್ಯಪಾಲರ ಮೇಲೆ ಯಾವ ರೀತಿಯ ಗೌರವವಿದೆ ಎಂದು ಅರಿವಾಗಿದೆ. ರಾಜ್ಯಪಾಲರ ಮೂಲಕ ಹೇಳಿಸಿರುವ ಸುಮಾರು 34 ಅಂಶಗಳಲ್ಲಿ ಹೆಚ್ಚಿನ ವಿಚಾರಗಳು ಈಗಾಗಲೇ ಘೋಷಣೆ ಮಾಡಿರುವುದಾಗಿದೆ. ಕೆಲವು ಘೋಷಣೆಗಳಿಗೆ 40% ಕಮಿಷನ್ ಸರ್ಕಾರಕ್ಕೆ ಸಿಕ್ಕಿಲ್ಲ. ಇದರಿಂದ ರಾಜ್ಯಪಾಲರ ಮೂಲಕ ಮತ್ತೊಮ್ಮೆ ಹೇಳಿಸುವ ಕಾರ್ಯವನ್ನು ಸರ್ಕಾರ ಮಾಡಿದೆ ಎಂದರು.
ಸಲೀಂ ಅಹ್ಮದ್ ಮಾತನಾಡಿ, ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದೆ. ರಾಜ್ಯಪಾಲರು ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇಲ್ಲಿ ಪ್ರಸ್ತಾಪವಾಗಿರುವ ವಿಚಾರವನ್ನು ನಾವು ಮುಂದೆ ಚರ್ಚಿಸುತ್ತೇವೆ. ಇದು ಸರ್ಕಾರದ ಕಡೆಯ ಅಧಿವೇಶನವಾಗಿದ್ದು ರಾಜ್ಯಪಾಲರ ಭಾಷಣ ಬೀಳ್ಕೊಡುಗೆಯ ಭಾಷಣದಂತೆ ಭಾಸವಾಯಿತು. ಸರ್ಕಾರದ ಆಯಸ್ಸು ಕೇವಲ 60 ದಿನ ಮಾತ್ರ. ರಾಜ್ಯದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಮಾಡಿರುವ ಅಭಿವೃದ್ಧಿ ಏನಿದ್ದರೂ ಅದು ಭ್ರಷ್ಟಾಚಾರದಲ್ಲಿ. ಬೆಲೆ ಏರಿಕೆ ಮೂಲಕ ಯುವಕರು ರೈತರು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ. ಅಗತ್ಯ ಕಾರ್ಯಕ್ರಮ ನೀಡಿಲ್ಲ, ಮನೆಗಳನ್ನು ಕಟ್ಟಿಸಿಕೊಟ್ಟಿಲ್ಲ. ಈ ವಿಚಾರವಾಗಿ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.