ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕ್ರಮವನ್ನು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್, ಪೊಲೀಸರು ಸಲ್ಲಿಸಿರುವ 'ಬಿ ರಿಪೋರ್ಟ್' ನ್ಯಾಯ ಸಿಗಬಹುದೆಂಬ ಭರವಸೆಯಿಂದ ಕಾಯುತ್ತಿದ್ದ ಮೃತನ ಕುಟುಂಬದ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಕಾರಣಕ್ಕಾಗಿ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದು. ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ರಾಜ್ಯ ಬಿಜೆಪಿ ಶಾಸಕರು ಆರೋಪಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಪೊಲೀಸ್ ಇಲಾಖೆ ಸ್ವಲ್ಪ ತಡವಾಗಿ 'ಬಿ ರಿಪೋರ್ಟ್' ರೂಪದಲ್ಲಿ ನೀಡಿದೆ. ಇದರಲ್ಲಿ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ ಎಂದಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮುನ್ನ ತನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದರು. ಆರೋಪಿ ಸ್ಥಾನದಲ್ಲಿರುವ ಈಶ್ವರಪ್ಪ ಅವರನ್ನು ಒಮ್ಮೆಯೂ ವಿಚಾರಣೆ ನಡೆಸದಿರುವುದು ತನಿಖೆಯ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ. ಆರೋಪಿ ಸ್ಥಾನದಲ್ಲಿರುವ ಈಶ್ವರಪ್ಪ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು, ನಡೆಸಿರುವ ಈ ಪೊಲೀಸ್ ತನಿಖೆ ಸರ್ಕಾರದ ಮಾನ ಉಳಿಸಲು ನಡೆಸಿರುವ ನಾಟಕ. ಭ್ರಷ್ಟ ಬಿಜೆಪಿ ಸರ್ಕಾರದ ಕಮಿಷನ್ ಹಪಾಹಪಿಗೆ ಇನ್ನಷ್ಟು ಜೀವಗಳು ಬಲಿಯಾಗದಿರಲಿ ಎಂದಷ್ಟೇ ಹಾರೈಸಬಲ್ಲೆ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಈ ಬಗ್ಗೆ ಮಾತನಾಡಿದ್ದು, ತನಿಖೆ ಸಂದರ್ಭದಲ್ಲೇ ಸಿಎಂ, ಬಿಎಸ್ವೈ, ಗೃಹ ಸಚಿವರು ಈಶ್ವರಪ್ಪ ಆರೋಪದಿಂದ ಹೊರಗಡೆ ಬರುತ್ತಾರೆಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಆಗಿನ್ನೂ ತನಿಖೆ ಪ್ರಾರಂಭವಾಗಿರಲಿಲ್ಲ. ರಾಜೀನಾಮೆಗೂ ಮುನ್ನವೇ ಆ ರೀತಿ ಹೇಳಿದ್ದರು. ಸಾವಿಗೂ ಮುನ್ನ ಗುತ್ತಿಗೆದಾರ ಸಂತೋಷ್ ಪಾಟೀಲ್ ಪಿಎಂ, ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಮೃತನ ಪತ್ನಿ ಕೂಡ ರಾಜ್ಯಪಾಲರಿಗೆ ಮನವಿ ಕೊಟ್ರು. ನಾವು ಇದರ ಬಗ್ಗೆ ಹೋರಾಟ ಮಾಡಿದ್ದೆವು. ಇದೆಲ್ಲದರ ಮಧ್ಯೆ ಈಗ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್ ಕೊಟ್ಟಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ನೇರವಾಗಿಯೇ ತನ್ನ ನೋವನ್ನು ಹೊರಹಾಕಿದ್ದರು. ಅವರು ಏನೇ ಮುಚ್ಚಿ ಹಾಕಿದ್ರು ಜನರಿಗೆ ಎಲ್ಲ ಗೊತ್ತಿದೆ ಎಂದಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಸಹ ಪ್ರತಿಕ್ರಿಯೆ ನೀಡಿದ್ದು, ಸಂತೋಷ್ ಪಾಟೀಲ್ ಪತ್ನಿ ದೂರು ಕೊಟ್ಟಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲವೆಂದು ಹೇಳಿದ್ದರು. ನ್ಯಾಯಯುತ ತನಿಖೆ ನಡೆದಿಲ್ಲ. ಅವರ ಮನೆಯವರ ನೋವು ಕಡಿಮೆಯಾಗಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಅದು ಆಗಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ : ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಈ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಈಶ್ವರಪ್ಪರ ಕೇಸ್ ಕ್ಲೋಸ್ ಮಾಡಿದ್ದಾರೆ. ಇದೊಂದು ದುರ್ದೈವದ ಸಂಗತಿ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಹುಶಃ ಈಶ್ವರಪ್ಪ ಅವರು ಸಿಎಂ ಬೊಮ್ಮಾಯಿ ಅವರನ್ನು ಹೆದರಿಸಿರಬಹುದು. ಅದಕ್ಕೆ ಹೆದರಿ ಅಧಿಕಾರಿಗಳ ಮೂಲಕ ಕೇಸ್ ಮುಚ್ಚಿಸಿರಬಹುದು. ಅವರ ಕುಟುಂಬದ ದುಃಖ ಇನ್ನೂ ಮರೆಯಾಗಿಲ್ಲ. ಅಷ್ಟರೊಳಗೆ ಬಿ ರಿಪೋರ್ಟ್ ಹಾಕಿದ್ದಾರೆ. ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಎಂದು ದೂರಿದರು.