ಬೆಂಗಳೂರು: ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಹಾಗೂ ಬಿಜೆಪಿ ತಮ್ಮ ಹಾಲಿ ಶಾಸಕರನ್ನು ಸೆಳೆಯಲು ನಡೆಸಿರುವ ತಂತ್ರಗಾರಿಕೆ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆಬಿಸಿಯಾಗಿ ಕಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ತೊಟ್ಟು ಬಸ್ ಯಾತ್ರೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನಾಯಕರು, ಮುಂದಿನ 75 ದಿನ ಬಿಜೆಪಿ ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಜನರ ವಿಶ್ವಾಸಗಳಿಸಲು ಬಸ್ ಯಾತ್ರೆ:ನಿರಂತರವಾಗಿ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಎಲ್ಲೆಲ್ಲಿ ತಮ್ಮ ನಾಯಕರನ್ನು ಸಂಪರ್ಕಿಸಿ ವಿವಿಧ ರೀತಿಯ ಆಮಿಷ, ಬೆದರಿಕೆ ಒಡ್ಡಿ ಪಕ್ಷ ಬಿಡುವಂತೆ ಮಾಡಲಿದ್ದಾರೋ ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡಿದೆ. ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಹಲವು ಜಿಲ್ಲೆಗಳ ಅಭ್ಯರ್ಥಿಗಳನ್ನು ಜೆಡಿಎಸ್ ಘೋಷಿಸಿದ್ದು, ಇದೀಗ ಕಾಂಗ್ರೆಸ್ಗೆ ಇನ್ನಷ್ಟು ಇಕ್ಕಟ್ಟನ್ನು ಹೆಚ್ಚಿಸಿದೆ. ಬಸ್ ಯಾತ್ರೆಯಲ್ಲಿ ಜನರ ವಿಶ್ವಾಸಗಳಿಸುವ ಕಾರ್ಯ ಮಾಡುತ್ತಿದ್ದರೆ, ಇನ್ನೊಂದೆಡೆ ಎಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಜನಪ್ರತಿನಿಧಿಗಳನ್ನು ಸೆಳೆಯುತ್ತಾರೋ ಅನ್ನುವ ಭೀತಿ ಕೈ ನಾಯಕರಿಗೆ ಕಾಡಲಾರಂಭಿಸಿದೆ.
ನಾಯಕರು ಪಕ್ಷ ಬಿಟ್ಟು ಹೋಗುವ ಭಯ: ಬಿಜೆಪಿ ಹಾಗೂ ಜೆಡಿಎಸ್ನಿಂದ ಹಲವು ಶಾಸಕರು ತಮ್ಮ ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಒಳಗೊಳಗೆ ತಮ್ಮವರು ಎಷ್ಟು ಮಂದಿ ಅತ್ತ ತೆರಳುತ್ತಾರೆ ಎನ್ನುವ ಮಾಹಿತಿ ಸ್ಪಷ್ಟವಾಗಿ ಸಿಗುತ್ತಿಲ್ಲ. ವಿವಿಧ ರೀತಿಯ ಆಮಿಷ ಒಡ್ಡುವ ಕಾರ್ಯವನ್ನು ಬಿಜೆಪಿ ಈಗಾಗಲೇ ಆರಂಭಿಸಿದೆ. ಹೊಸಬರಿಗೆ ಅವಕಾಶ ನೀಡಬೇಕೆಂಬ ಒತ್ತಡ ಕಾಂಗ್ರೆಸ್ನಲ್ಲಿ ಹೆಚ್ಚಾಗಿದೆ. ಹಿರಿಯರಿಗೆ ಮಣೆ ಹಾಕಿದರೆ ಯುವಕರಿಗೆ ಅಸಮಾಧಾನ, ಯುವಕರಿಗೆ ಮಣೆ ಹಾಕಿದರೆ ಹಿರಿಯರಿಗೆ ಬೇಸರ. ಈ ಕಾರಣದಿಂದ ಪಕ್ಷದ ನಾಯಕರನ್ನು ಮನವೊಲಿಸುವುದೇ ಕಾಂಗ್ರೆಸ್ ರಾಜ್ಯ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.
ವಿಶೇಷ ಸಮಿತಿ ರಚನೆ: ಈಗಾಗಲೇ ಮುಂಬರುವ ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನಿಸಿತ್ತು. ಒಂದೊಂದು ಕ್ಷೇತ್ರದಿಂದ ಕನಿಷ್ಠ 5 ರಿಂದ 15ರವರೆಗೂ ಅರ್ಜಿ ಸಲ್ಲಿಕೆಯಾಗಿದೆ. ಇದೀಗ ಅಂತಿಮವಾಗಿ ಒಂದರಿಂದ ಮೂರು ಅಭ್ಯರ್ಥಿಗಳ ಆಯ್ಕೆ ಮಾಡಿ ಪಟ್ಟಿ ಸಲ್ಲಿಸಲು ವಿಶೇಷ ಸಮಿತಿ ರಚಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಸಮಿತಿ ಪಟ್ಟಿ ಸಲ್ಲಿಸಬೇಕಿದೆ. ಈ ಮಧ್ಯೆ ಜನರ ನಡುವೆ ತೆರಳಿ ಕಾಂಗ್ರೆಸ್ ರಾಜ್ಯ ನಾಯಕರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕಿದೆ.