ಕರ್ನಾಟಕ

karnataka

ETV Bharat / state

ಯಾರು ಎಲ್ಲಿಂದ ಸ್ಪರ್ಧೆ ಎಂಬ ವಿಚಾರದಲ್ಲಿ ಇನ್ನೂ ಗೊಂದಲ... ಚಟುವಟಿಕೆ ಕೇಂದ್ರವಾದ ಸಿದ್ದು ನಿವಾಸ

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಇನ್ನೂ ಕೆಲವಡೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದೆ.

ಚಟುವಟಿಕೆ ಕೇಂದ್ರವಾದ ಸಿದ್ದು ನಿವಾಸ

By

Published : Mar 16, 2019, 5:35 PM IST

ಬೆಂಗಳೂರು: ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರುವ ಸಾಧ್ಯತೆ ಹಿನ್ನೆಲೆ ಸಿದ್ದರಾಮಯ್ಯರನ್ನು ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಚರ್ಚಿಸಿದರು.

ಸಭೆ ನಂತರ ಮಾತನಾಡಿದ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಎ.ಮಂಜು ಕಾಂಗ್ರೆಸ್​ನಲ್ಲಿ ಇರೋವರೆಗೂ ನಮ್ಮ ನಾಯಕರೇ. ಅವರು ಕಾಂಗ್ರೆಸ್ ಬಿಟ್ಟು ಹೋದ್ರೆ ನಮ್ಮ ನಾಯಕರಲ್ಲ. ಎ.ಮಂಜು ಜೊತೆ ನಮ್ಮ ಸ್ನೇಹ ವೈಯಕ್ತಿಕವಾಗಿ ಚೆನ್ನಾಗಿಯೇ ಇರುತ್ತೆ. ಮಂಜು‌ ಬಿಜೆಪಿ ಸೇರುವ ನಿರ್ಧಾರ ಇನ್ನೂ ಕೈಗೊಂಡಿಲ್ಲ. ಎ.ಮಂಜು ಅವರ ಜೊತೆ ಹಾಸನ ಮುಖಂಡರು ಚರ್ಚೆ ನಡೆಸಿ ಮನವೊಲಿಸುತ್ತೇವೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎಂದರು.

ಹಾಸನದಿಂದ ದೇವೇಗೌಡ್ರೇ ಅಭ್ಯರ್ಥಿ ಆಗಬೇಕೆಂದು ನಮ್ಮ ಭಾವನೆಯಿತ್ತು. ಆದರೆ, ಈಗ ಮೈತ್ರಿ ಪ್ರಕಾರ ನಡೆದುಕೊಳ್ಳಲೇಬೇಕು. ಹಾಸನದಲ್ಲಿ ನಾವೆಲ್ಲ ಜೆಡಿಎಸ್ ಅಭ್ಯರ್ಥಿಗೇ ಬೆಂಬಲಿಸುತ್ತೇವೆ. ಮೈತ್ರಿ ಧರ್ಮ ಪಾಲಿಸಲು ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ. ಹಾಗಾಗಿ ನಾವೆಲ್ಲ ಪ್ರಜ್ವಲ್ ರೇವಣ್ಣ ಪರ ಮತ ಕೇಳುತ್ತೇವೆ. ಹಾಸನದಲ್ಲಿ ಕಾಂಗ್ರೆಸ್-ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳು. ಹಾಗಾಗಿ ಎ.ಮಂಜು ಈ ರೀತಿ ನಿಲುವಿಗೆ ಬಂದಿರಬಹುದು. ಎ.ಮಂಜು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎಂದು ಹೇಳಿದರು.

ಚಟುವಟಿಕೆ ಕೇಂದ್ರವಾದ ಸಿದ್ದು ನಿವಾಸ

ಬೆಂಬಲ ಕೇಳಿದ್ದ ರೇವಣ್ಣ:

ನಿನ್ನೆ ರಾತ್ರಿಯಷ್ಟೇ ಸಿದ್ದರಾಮಯ್ಯ ಭೇಟಿ ಮಾಡಿದ್ದ ಹೆಚ್​.ಡಿ.ರೇವಣ್ಣ ಹಾಸನದಲ್ಲಿ ಪುತ್ರ ಪ್ರಜ್ವಲ್​ಗೆ ಬೆಂಬಲ ಸೂಚಿಸುವಂತೆ ಕೋರಿಕೊಂಡಿದ್ದರು. ಇದರ ಬೆನ್ನಲ್ಲೇ ಇಂದು ಹಾಸನ ಜಿಲ್ಲಾ ಕಾಂಗ್ರೆಸ್‍ ನಾಯಕರನ್ನು ಸಿದ್ದರಾಮಯ್ಯ ಕರೆಸಿಕೊಂಡು ಮಾತುಕತೆ ನಡೆಸಿ ಕಳಿಸಿದ್ದಾರೆ.

ಉತ್ತರ ಶಾಸಕರ ಭೇಟಿ:

ಇನ್ನು ಬೆಂಗಳೂರು ಉತ್ತರದಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಸ್ಪರ್ಧಿಸುತ್ತಾರೆ. ಹಾಗಾಗಿ ಎಸ್​.ಟಿ.ಸೋಮಶೇಖರ್, ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ಕೆ.ಆರ್‍.ಪುರ ಶಾಸಕ ಭೈರತಿ ಬಸವರಾಜ ಭೇಟಿ ಕೊಟ್ಟು ಮಾತುಕತೆ ನಡೆಸಿದರು.

ಭೇಟಿ ಸಂದರ್ಭ ಇವರು ಉತ್ತರದಲ್ಲಿ ಕಣಕ್ಕಿಳಿಯೋದು ಯಾರು? ದೇವೇಗೌಡರಾ? ಅಥವಾ ಮತ್ತಿನ್ಯಾರು ಅನ್ನೋದು ಕೂಡಲೇ ಖಚಿತತೆ ಸಿಕ್ರೆ ಉತ್ತಮ. ನಾವು ಕೂಡ ಉತ್ತಮ‌ ತಯಾರಿ ಮಾಡಿಕೊಳ್ಳಬಹುದು. ನಮ್ಮ ಕ್ಷೇತ್ರಗಳ ಅಭಿವೃದ್ಧಿ ಕೂಡ ಆಗಬೇಕಿದೆ. ಅನುದಾನ ನೀಡುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈಗ ಜನರ ಬಳಿ ಹೋಗಿ ವೋಟ್ ಕೇಳೋದು ಹೇಗೆ ನೀವೇ ಹೇಳಿ ಸರ್. ಇದು ಕೇವಲ ನಮ್ಮಿಬ್ಬರ ಸಮಸ್ಯೆ ಅಲ್ಲ. ‌ನಮ್ಮ ಇತರೆ ಐದು ಶಾಸಕರ ಸಮಸ್ಯೆಯೂ ಆಗಿದೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸೋಮಶೇಖರ್​ ಅಸಮಾಧಾನ:

ನಮಗೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬೇಸರವಿದೆ. ನಮ್ಮ ಯಾವ ಕೆಲಸಗಳೂ ಕೂಡ ಆಗುತ್ತಿಲ್ಲ. ನಾವು ಏಳು ಮಂದಿ ಶಾಸಕರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿದ್ದೇವೆ. ದೇವೇಗೌಡರು ಮತ್ತು ಸಿಎಂ ನಮ್ಮ ಡಿಸಿಎಂ ಜೊತೆ ಕೂತು ಮಾತನಾಡಿದ್ರೆ ಸಮಸ್ಯೆ ಬಗೆಹರಿಯುತ್ತದೆ. ಮಾತುಕತೆ ನಡೆದರೆ ಮಾತ್ರ ನಾವು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೆಲಸ ಮಾಡುತ್ತೇವೆ. ಇಲ್ಲದೇ ಹೋದರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಿಡಿಎ ಅಧ್ಯಕ್ಷನಾಗಿ ಕ್ಯಾಬಿನೇಟ್ ದರ್ಜೆ ಸ್ಥಾನ ಮಾನ ಇದ್ರೂ ನನಗೇ ಕೆಲಸ ಮಾಡಲು ಬಿಡುತ್ತಿಲ್ಲ. ಬಾಲಸುಬ್ರಹ್ಮಣ್ಯಂ ಅನ್ನೋ ನಿವೃತ್ತ ಅಧಿಕಾರಿಯೊಬ್ಬ ಇಡೀ ಬಿಡಿಎ ಹ್ಯಾಂಡಲ್ ಮಾಡುತ್ತಿದ್ದಾನೆ. ಹಾಗಾದ್ರೆ ನಾವೆಲ್ಲ ಎರಡು ಬಾರಿ ಶಾಸಕರು ಆದವರು ಅಧ್ಯಕ್ಷರಾಗಿ ಇರೋದು ಯಾಕೆ? ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೆಲಸ ಮಾಡಿ ಅಂತ ಎಐಸಿಸಿ ಹೇಳಿದೆ. ಆದರೆ, ನಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ದೇವೇಗೌಡರು ಮತ್ತು ಸಿಎಂ ಮಾತುಕತೆ ನಡೆಸಲೇಬೇಕು ಎಂದು ಶಾಸಕ ಸೋಮಶೇಖರ್ ಆಗ್ರಹಿಸಿದರು.

ABOUT THE AUTHOR

...view details