ಕರ್ನಾಟಕ

karnataka

ETV Bharat / state

ಬಹಿರಂಗ ಹೇಳಿಕೆ ನೀಡದಂತೆ ಬಿ.ಕೆ.ಹರಿಪ್ರಸಾದ್​ಗೆ ಕಾಂಗ್ರೆಸ್​ ಹೈಕಮಾಂಡ್ ತಾಕೀತು - ಬೆಂಗಳೂರು ನ್ಯೂಸ್​

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ವಿಧಾನ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ, ಯಾರ ಬಗ್ಗೆಯೂ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಕಾಂಗ್ರೆಸ್​ ಹೈಕಮಾಂಡ್ ಎಚ್ಚರಿಕೆ ನೀಡಿದೆ.

Hariprasad
ಬಿ.ಕೆ ಹರಿಪ್ರಸಾದ್​

By ETV Bharat Karnataka Team

Published : Sep 12, 2023, 9:28 AM IST

ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪಿರುವುದರಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿರುವ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಶನಿವಾರ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಟೀಕಾಪ್ರಹಾರ ನಡೆಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ, ಯಾರ ಬಗ್ಗೆಯೂ ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್​​ ಹೈಕಮಾಂಡ್ ಮೌಖಿಕ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಹರಿಪ್ರಸಾದ್ ಹೇಳಿಕೆಗೆ ಆಕ್ಷೇಪ: ಸಿದ್ದರಾಮಯ್ಯರ ವಿರುದ್ಧ ಹರಿಪ್ರಸಾದ್ ಅವರು ಮುಸುಕಿನ ಗುದ್ದಾಟ ನಡೆಸುತ್ತಿರುವುದು ಆಡಳಿತ ಪಕ್ಷದೊಳಗೆ ಅಸಮಾಧಾನ ಉಂಟುಮಾಡಿದೆ. ಬಹಿರಂಗ ಹೇಳಿಕೆ ನೀಡುವ ಬದಲು ನೇರವಾಗಿ ಪಕ್ಷದ ಹೈಕಮಾಂಡ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕೆಲವು ಹಿರಿಯ ನಾಯಕರು ಮತ್ತು ಸಚಿವರು ಸಲಹೆ ನೀಡಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಹರಿಪ್ರಸಾದ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹರಿಪ್ರಸಾದ್​ ಅವರ ಹಿರಿತನ ಮತ್ತು ರಾಜಕೀಯ ಅನುಭವವನ್ನು ಉಲ್ಲೇಖಿಸಿ, ಇಂಥ ಹೇಳಿಕೆಗಳು ಅವರ ನಿಲುವಿಗೆ ತಕ್ಕುದಲ್ಲ ಎಂದಿದ್ದಾರೆ.

"ಹರಿಪ್ರಸಾದ್ ಹಿರಿಯ ನಾಯಕರಾಗಿದ್ದು, ಯುವಕರಿಗೆ ಮಾರ್ಗದರ್ಶನ ನೀಡಬೇಕು. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ನೇರವಾಗಿಯೇ ಮಾತನಾಡಬಹುದು. ಅವರೊಂದಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಬಹುದು. ಇದನ್ನು ಹೊರತುಪಡಿಸಿ ನಿಲುವು ವ್ಯಕ್ತಪಡಿಸಲು ಬೇರೆ ವೇದಿಕೆಗಳನ್ನು ಬಳಸುವುದು ಸರಿಯಲ್ಲ. ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದು ಸೂಕ್ತವೂ ಅಲ್ಲ. ಇದು ಪಕ್ಷ, ಸರ್ಕಾರ ಮತ್ತು ಅವರಿಗೂ ಒಳ್ಳೆಯದಲ್ಲ"-ಸಚಿವ ಎಂ.ಬಿ.ಪಾಟೀಲ್.

ಇದನ್ನೂ ಓದಿ:ಸಿಎಂ ವಿರುದ್ಧ ಬಿ ಕೆ ಹರಿಪ್ರಸಾದ್ ಹೇಳಿಕೆ ಮೇಲೆ ಪಕ್ಷದಿಂದ ನಿಗಾ, ಸೂಕ್ತ ತೀರ್ಮಾನ: ಸಚಿವ ಎಂ ಬಿ ಪಾಟೀಲ್

"ಪಕ್ಷಕ್ಕಿಂತ ಯಾರೂ ಮೇಲಲ್ಲ, ಗೆರೆ ದಾಟಬಾರದು. ಹರಿಪ್ರಸಾದ್ ಹೇಳಿಕೆ ಸೇರಿದಂತೆ ಎಲ್ಲವನ್ನೂ ಪಕ್ಷ ಗಮನಿಸುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಸ್ಥಾನಗಳು ಬರುತ್ತವೆ, ಹೋಗುತ್ತವೆ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಹಾಗೆ ಮಾತನಾಡುವುದು ಸ್ವೀಕಾರಾರ್ಹವಲ್ಲ. ಹರಿಪ್ರಸಾದ್ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ. ಅವರ ಗೊಡವೆ ಏನೆಂಬುದನ್ನು ಅವರೇ ಹೇಳಬೇಕು" - ಸಚಿವ ದಿನೇಶ್ ಗುಂಡೂರಾವ್.

"ಹರಿಪ್ರಸಾದ್ ತಮ್ಮ ಅಸಮಾಧಾನದ ಬಗ್ಗೆ ನೇರವಾಗಿ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಮಾತನಾಡಬೇಕು. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದು, ಇತ್ತೀಚಿನ ದಿನಗಳಲ್ಲಿ ಅಸಮಾಧಾನಗೊಂಡಿದ್ದಾರೆಂದು ನನಗೆ ತೋರುತ್ತದೆ. ಅವರಿಗೆ ಸಚಿವ ಸ್ಥಾನ ನೀಡದ್ದಕ್ಕೆ ಕಾರಣ ನನಗೆ ಗೊತ್ತಿಲ್ಲ. ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಬಗ್ಗೆಯೂ ನನಗೆ ಮಾಹಿತಿ ಇಲ್ಲ"- ಶಾಸಕ ಬಸವರಾಜ ರಾಯರೆಡ್ಡಿ.

ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು?:ಪಂಚೆ ಹಾಕಿ, ಖಾಕಿ ಚಡ್ಡಿ ಹಾಕಿಕೊಂಡರೆ ಅವರು ಸಮಾಜವಾದಿ ಆಗಲ್ಲ. ದೇವರಾಜ್​ ಅರಸು ಅವರ ಕಾರಿನಲ್ಲಿ ಕುಳಿತರೆ ದೇವರಾಜ್​ ಅರಸು ಆಗಲ್ಲ. ಅರಸು ಅವರ ಚಿಂತನೆಗಳು ಇರಬೇಕು. ನಾನು ಸೋತಿರಬಹುದು, ಆದರೆ ಸತ್ತಿಲ್ಲ. ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ. ನನ್ನನ್ನು ಮಂತ್ರಿ ಮಾಡದಿರುವುದಕ್ಕೆ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬಿ.ಕೆ.ಹರಿಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಲ್ಲದೇ ಗೃಹ ಸಚಿವ ಜಿ.ಪರಮೇಶ್ವರ್​ ಅವರಂತಹ ದಲಿತ ನಾಯಕರನ್ನು ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಪರಿಗಣಿಸದೇ ಇರುವುದು ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರಂತಹ ಎಸ್‌ಟಿ ಮುಖಂಡರನ್ನು ಪರಿಗಣಿಸದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಹರಿಪ್ರಸಾದ್ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಅವರು ಹಿರಿಯ ನಾಯಕರು. ಪಕ್ಷದ ನಾಯಕರೊಂದಿಗೆ ಮಾತನಾಡಿ ಸಮಸ್ಯೆಗಳಿದ್ದರೆ ಪರಿಹರಿಸುತ್ತಾರೆ" ಎಂದು ಹೇಳಿದ್ದರು. (ಪಿಟಿಐ)

ಇದನ್ನೂ ಓದಿ:ಹಗರಣಗಳಿಂದ ಪಾರಾಗಲು ‌ನನ್ನ ವಿರುದ್ಧ ಹೈಕಮಾಂಡ್​​ಗೆ ದೂರು: ಬಿ ಕೆ ಹರಿಪ್ರಸಾದ್

ABOUT THE AUTHOR

...view details