ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ನಾಯಕರು ತಮಿಳುನಾಡು ಏಜೆಂಟ್​ರಂತೆ ವರ್ತಿಸುತ್ತಿದ್ದಾರೆ: ಬಿ ಎಸ್ ಯಡಿಯೂರಪ್ಪ - ಕಾಂಗ್ರೆಸ್​ ಸರ್ಕಾರ

ಕರ್ನಾಟಕದ ನೆಲ, ಜಲ ರಕ್ಷಣೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

BJP Protest for Cauvery Water
ಬಿಜೆಪಿಯಿಂದ ಕಾವೇರಿ ನೀರಿಗಾಗಿ ಹೋರಾಟ

By ETV Bharat Karnataka Team

Published : Sep 23, 2023, 4:22 PM IST

ಬೆಂಗಳೂರು: ರಾಜ್ಯದ ಕಾಂಗ್ರೆಸ್ ನಾಯಕರು ತಮಿಳುನಾಡಿನ ಏಜೆಂಟ್​ರಂತೆ ವರ್ತನೆ ಮಾಡುತ್ತಿರುವುದು ಖಂಡನೀಯ. ಇವತ್ತಿನಿಂದ ನೀರು ಬಿಡದೆ ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಕಾವೇರಿ ನೀರಿನ ವಿಚಾರವೂ ಸೇರಿ ವಿವಿಧ ರಂಗಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ, ಬಿಜೆಪಿ ವತಿಯಿಂದ ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನ ವಿರೋಧಿ, ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ. ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್ ರೀತಿ ನಡೆದುಕೊಂಡಿದೆ. ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟು ನಮ್ಮನ್ನು ಸಂಕಷ್ಟಕ್ಕೆ ನೂಕಿದ್ದಾರೆ. ತಜ್ಞರು ಬಂದು ವಸ್ತು ಸ್ಥಿತಿ ಅರಿಯಲಿ ಎಂದು ಹೇಳಿದರು.

ತಮಿಳುನಾಡು ತೃಪ್ತಿಪಡಿಸಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೀಗೆ ಮಾಡ್ತಾ ಇದ್ದಾರೆ. ನಿಮಗೆ ಯೋಗ್ಯತೆ ಇದ್ರೆ ಸರಿಪಡಿಸಿ. ಇಲ್ಲ ರಾಜೀನಾಮೆ ನೀಡಿ ಮನೆಗೆ ಹೋಗಿ. ನಿಮಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ಒಂದು ಹನಿ ನೀರು ಬಿಡಕೂಡದು. ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗು ಕುಮಾರಸ್ವಾಮಿ ಕೂಡ ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ ಕರಾಳ ಆಡಳಿತ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದಲ್ಲಿ ಕರಾಳ ಆಡಳಿತ ನಡೆಯುತ್ತಿದೆ. ಜನತೆಗೆ ಸರಿಯಾದಂತ ನೀರನ್ನು ಕೊಡಲು ಯೋಗ್ಯತೆ ಇಲ್ಲ, ಸರಿಯಾಗಿ ವಿದ್ಯುತ್ ಶಕ್ತಿ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಅಭಿವೃದ್ಧಿ ರಾಜ್ಯದಲ್ಲಿ ಸಂಪೂರ್ಣವಾಗಿ ಬಿದ್ದು ಹೋಗಿದೆ. ರಾಜ್ಯವನ್ನು ಅದೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕರ್ನಾಟಕದ ನೆಲ, ಜಲ ರಕ್ಷಣೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಕಾವೇರಿ ವಿಚಾರದಲ್ಲಿ ಪ್ರಾರಂಭದಿಂದಲೂ ಕೂಡ ಈ ಸರ್ಕಾರ ನಿರ್ಲಕ್ಷ ಮಾಡಿದೆ, ಎಡವಿದೆ. ಯಾವುದೇ ಬದ್ಧತೆಯಿಂದ ಕೆಲಸ ಮಾಡಿಲ್ಲ. ಹೀಗಾಗಿ ಬರುವಂತ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಜನರಿಗೆ ಕುಡಿಯುವ ನೀರಿಗೆ ದೊಡ್ಡ ಹಾಹಾಕಾರ ಆಗುತ್ತದೆ. ಇದಕ್ಕೆ ನೇರ ಹೊಣೆ ಸಿದ್ದರಾಮಯ್ಯ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲ CWMA ಸಭೆಯಲ್ಲಿ ನಮ್ಮ ಅಧಿಕಾರಿಗಳು ಮಾತಾಡೇ ಇಲ್ಲ. ಅವರು ಆದೇಶ ಮಾಡೋಕು ಮುನ್ನವೇ ಇವರೇ ನೀರು ಬಿಟ್ಟರು. ಸರ್ವಪಕ್ಷ ಸಭೆಯಲ್ಲಿ ಐಎ ಹಾಕ್ತೀವಿ ಅಂದ್ರು, ಹಾಕೇ ಇಲ್ಲ. ತಮಿಳುನಾಡು ಅಕ್ರಮವಾಗಿ ನೀರು ಬಳಕೆ ಮಾಡಿಕೊಂಡಿದೆ. 32 ಟಿಎಂಸಿ ನೀರು ಬಳಸಬೇಕಿತ್ತು. ಆದರೆ ಅವರು 65 ಟಿಎಂಸಿ ನೀರು ಬಳಸಿದ್ದಾರೆ. ತಮಿಳುನಾಡಿನ ರೈತರ ಹಿತ ರಕ್ಷಣೆ ಮಾಡೋದೇ ನಮ್ಮ ನೀರಾವರಿ ಸಚಿವರ ಹೇಳಿಕೆ. ಇಷ್ಟು ಬೇಜವಾಬ್ದಾರಿಯ ಸರ್ಕಾರ ಕರ್ನಾಟಕದ ಇತಿಹಾಸದಲ್ಲೇ ನೋಡಿಲ್ಲ. ಸುಪ್ರೀಂ ಕೋರ್ಟ್​ನಲ್ಲೂ ಸರಿಯಾಗಿ ವಾದವನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿಗೆ ನೀರಿಲ್ಲ ಅಂದರೆ ದೇಶಕ್ಕೆ ಅವಮಾನ. ಇದರ‌ ಬಗ್ಗೆ ಸುಪ್ರೀಂ ಕೋರ್ಟ್ ಗಮನಕ್ಕೆ‌ ತರಬೇಕಿತ್ತು. ಡಿಸಿಎಂ ಡಿ. ಕೆ. ಶಿವಕುಮಾರ್ ಬ್ರಾಂಡ್ ಬೆಂಗಳೂರು ಅಂತಾರೆ. ಬ್ರಾಂಡ್ ಬೆಂಗಳೂರೋ ಬಾಂಡ್ ಬೆಂಗಳೂರೋ ಮುಂದೆ ಗೊತ್ತಾಗುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಮಿಳುನಾಡು ಹಿತ ಕಾಪಾಡಲು. ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಟ್ಟಿದ್ದಾರೆ. ಮಾತು ಎತ್ತಿದ್ರೆ ಕೇಂದ್ರಕ್ಕೆ ಪತ್ರ ಬರೆದಿದ್ದೀವಿ ಅಂತಾರೆ. ಕೇವಲ ರಾಜಕಾರಣಕ್ಕೆ ಸೀಮಿತ ಮಾಡಿಕೊಂಡಿದ್ದಾರೆ. ನೀರಿನ ಬಗ್ಗೆ ತಮಿಳುನಾಡು ಸಿಎಂಗೆ ಮನವರಿಕೆ ಮಾಡಿಕೊಡಬೇಕಿತ್ತು. ಮಧ್ಯಪ್ರವೇಶ ಮಾಡಬೇಕಾದರೆ ಇದಕ್ಕೆ ಸೋನಿಯಾ ಗಾಂಧಿ ಅವರು ಮಧ್ಯಪ್ರವೇಶ ಮಾಡಬೇಕು, ಕೇಂದ್ರ ಸರ್ಕಾರ ಅಲ್ಲ. ಸೋನಿಯಾ ಗಾಂಧಿ ಇಂಡಿಯಾದ ಪ್ರಮುಖ ನಾಯಕಿಯಾಗಿದ್ದಾರೆ. ಹೀಗಾಗಿ ಕುಂಟು ನೆಪ ಹೇಳದೆ ಅವರಿಂದ‌ ಬಗೆಹರಿಸಿ ಎಂದು ಒತ್ತಾಯಿಸಿದರು.

ಇಡೀ ರಾಜ್ಯದಲ್ಲಿ ನಾವು ವಿರೋಧ ಪಕ್ಷ ಇರಬಹುದು. ಆದರೆ ಬೆಂಗಳೂರಲ್ಲಿ ಅತಿ ಹೆಚ್ಚು ಶಾಸಕರು ನಾವು ಇದ್ದೇವೆ. ಹೀಗಾಗಿ ಜವಾಬ್ದಾರಿಯುತ ಜನಪ್ರತಿನಿಧಿಗಳಾಗಿ ನಾವು ಜನ ಜಾಗೃತಿ ಮಾಡುತ್ತೇವೆ. ಕಾವೇರಿ ಕೊಳ್ಳದ ರೈತರಿಗೆ ನೀರು ಬಿಡದೇ ಬೆಳೆಗಳು ಎಲ್ಲವೂ ನಾಶವಾಗಿವೆ. ಪ್ರತಿ ಹೆಕ್ಟೇರ್​ಗೆ 25,000 ರೂ. ಪರಿಹಾರ ಕೊಡಬೇಕು. ನೆಲ ಜಲದ ವಿಷಯದಲ್ಲಿ ನಾವು ರಾಜಕಾರಣ ಮಾಡಲ್ಲ. ಕಾವೇರಿ ಹೋರಾಟ ನಮ್ಮ ಗೆಲುವಿನ ವರೆಗೂ ನಡೆಯಬೇಕು. ಇದು ಸಾಂಕೇತಿಕ ಹೋರಾಟ. ಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಕೂಡಲೇ ನೀರು ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಬೊಮ್ಮಾಯಿ ಆಗ್ರಹಿಸಿದರು.

ಇದನ್ನೂ ಓದಿ :ಕಾವೇರಿ ಬಿಕ್ಕಟ್ಟು: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ... ರಸ್ತೆ ತಡೆಗೆ ಮುಂದಾದ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

ABOUT THE AUTHOR

...view details