ETV Bharat Karnataka

ಕರ್ನಾಟಕ

karnataka

ETV Bharat / state

ವರುಣದಿಂದ ಟಿಕೆಟ್ ಬಯಸಿ ಯತೀಂದ್ರ ಅರ್ಜಿ: ಸಿದ್ದರಾಮಯ್ಯ ನಡೆಯದ್ದೇ ಕುತೂಹಲ - ಯತೀಂದ್ರ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಕುತೂಹಲ

ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನಲಾದ ವರುಣ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅವರ ಪುತ್ರ ಹಾಗು ಹಾಲಿ ಶಾಸಕ ಡಾ.ಯತೀಂದ್ರ ಅರ್ಜಿ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Yathindra and Director S Narayan
ಡಾ ಯತೀಂದ್ರ ಹಾಗೂ ನಿರ್ದೇಶಕ ಎಸ್​ ನಾರಾಯಣ್​
author img

By

Published : Nov 17, 2022, 9:12 AM IST

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಚಾರ ರೋಚಕ ತಿರುವು ಪಡೆದುಕೊಂಡಿದೆ. ಕಳೆದ ಬಾರಿ ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಈ ಬಾರಿಯೂ ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವರುಣ ಹಾಗೂ ಕೋಲಾರದಿಂದ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿತ್ತು.

ಈ ಎರಡು ಕ್ಷೇತ್ರಗಳ ಪೈಕಿ ವರುಣ ಮಾತ್ರ ಪಕ್ಕಾ ಎಂದು ಹೇಳಲಾಗುತ್ತಿತ್ತು. ಇನ್ನೊಂದು ಪ್ರಬಲ ಕ್ಷೇತ್ರದ ಹುಡುಕಾಟವನ್ನು ಸಿದ್ದರಾಮಯ್ಯ ನಡೆಸಿದ್ದು ಅದು ಕೋಲಾರ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅದೇ ರೀತಿ ಚಾಮರಾಜಪೇಟೆ, ತುಮಕೂರು ನಗರ, ಚಿಕ್ಕಮಗಳೂರು, ಚಾಮುಂಡೇಶ್ವರಿ ಬಾದಾಮಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಹೆಸರು ಇವರ ಎರಡನೇ ಆಯ್ಕೆಯಲ್ಲಿ ಕೇಳಿ ಬಂದಿತ್ತು.

ಆದರೆ ಇದೀಗ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನಲಾದ ವರುಣದಿಂದಲೇ ಹಾಲಿ ಶಾಸಕ ಹಾಗೂ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ: ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯಲು ಬಯಸುವ ಅಭ್ಯರ್ಥಿಗಳಿಂದ ಕಾಂಗ್ರೆಸ್ ಪಕ್ಷ ಅರ್ಜಿ ಆಹ್ವಾನಿಸಿದ್ದು, ನ. 5 ರಿಂದ 15 ರವರೆಗೆ ಅರ್ಜಿ ಸ್ವೀಕಾರಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಸಾಕಷ್ಟು ಆಕಾಂಕ್ಷಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ದಿನಾಂಕವನ್ನು ನವೆಂಬರ್ 21ಕ್ಕೆ ವಿಸ್ತರಿಸಲಾಗಿದೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕನಕಪುರದಿಂದ ಮರು ಆಯ್ಕೆ ಬಯಸಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಚುನಾವಣಾ ಕಣಕ್ಕಿಳಿಯಲು ಬಯಸುವ ಪ್ರತಿಯೊಬ್ಬ ಆಕಾಂಕ್ಷಿಯು ತಮ್ಮ ಇಷ್ಟದ ಕ್ಷೇತ್ರದಿಂದ ಅರ್ಜಿ ಸಲ್ಲಿಸುವಂತೆ ಈಗಾಗಲೇ ಪಕ್ಷದ ಹೈಕಮಾಂಡ್ ನಾಯಕರ ಸೂಚನೆ ರವಾನೆಯಾಗಿದೆ. ಡಿ ಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು.

ಈ ಮಧ್ಯೆ ಈ ಸಲದ ಚುನಾವಣೆಯಲ್ಲಿ ಒಬ್ಬರಿಗೆ ಒಂದೇ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಎಂಬ ಹೇಳಿಕೆಯನ್ನು ಸಹ ಡಿಕೆಶಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದಲೇ ಅರ್ಜಿ ಸಲ್ಲಿಕೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೀಗ ಯತೀಂದ್ರ ಸಿದ್ದರಾಮಯ್ಯ ಅರ್ಜಿ ಸಲ್ಲಿಸುವ ಮೂಲಕ ಕುತೂಹಲ ಇನ್ನಷ್ಟು ಗರಿಗೆದರಿದೆ.

ಇದನ್ನೂ ಓದಿ:ಕಾಂಗ್ರೆಸ್ ಟಿಕೆಟ್​​​​ಗೆ ಅರ್ಜಿ ಸಲ್ಲಿಸುವಿಕೆ: ನವೆಂಬರ್ 21ರವರೆಗೆ ಅವಧಿ ವಿಸ್ತರಣೆ

ಇದರ ಜೊತೆ ಜೊತೆಗೆ ಅರ್ಜಿ ಸಲ್ಲಿಕೆ ಆರಂಭವಾಗಿ 11 ದಿನ ಕಳೆದರೂ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಆಕಾಂಕ್ಷಿಯಾಗಿ ತಮ್ಮ ಅರ್ಜಿಯನ್ನು ಸಲ್ಲಿಸಿಲ್ಲ. ಇವರ ಆಯ್ಕೆಯ ಕ್ಷೇತ್ರ ಯಾವುದು? ಎಷ್ಟು ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸುತ್ತಿದ್ದಾರೆ? ಚುನಾವಣೆಗೆ ಸ್ಪರ್ಧಿಸುತ್ತಾರಾ? ಇಲ್ಲವಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡಲು ಆರಂಭಿಸಿವೆ. ನಾಳೆ ಅಥವಾ ನಾಡಿದ್ದು ಸಿದ್ದರಾಮಯ್ಯ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ ಎಂಬ ಮಾತೂ ಸಹ ಕೇಳಿ ಬರುತ್ತಿದೆ.

ಕುತೂಹಲ ಹೆಚ್ಚಿಸಿದ ಸಿದ್ದರಾಮಯ್ಯ ನಡೆ:ವರುಣ ಕ್ಷೇತ್ರದ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ ಯತೀಂದ್ರ ಸಿದ್ದರಾಮಯ್ಯ ಸಾಕಷ್ಟು ಹೊಸ ಕುತೂಹಲ ಮೂಡಲು ಕಾರಣರಾಗಿದ್ದಾರೆ. ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲ್ವಾ? ಪುತ್ರ ವ್ಯಾಮೋಹದಿಂದ ಮತ್ತೊಮ್ಮೆ ವರುಣಾ ಕ್ಷೇತ್ರ ತ್ಯಾಗ ಮಾಡಿದ್ರಾ? ಬೇರೆಡೆ ಸೋಲುವ ಭೀತಿ ಇದ್ರೂ ಸಿದ್ದರಾಮಯ್ಯ ರಿಸ್ಕ್ ತೆಗೆದುಕೊಳ್ತಿದ್ದಾರಾ? ಕ್ಷೇತ್ರ ಆಯ್ಕೆಯಲ್ಲಿ ಸಿದ್ದರಾಮಯ್ಯ ನಡೆ ಇನ್ನೂ ನಿಗೂಢವಾಗಿದೆ. ಕೋಲಾರದಿಂದ ಸ್ಫರ್ಧೆ ಖಚಿತಪಡಿಸಿ, ಸಿದ್ದರಾಮಯ್ಯ ವಿರೋಧಿಗಳ ದಿಕ್ಕು ತಪ್ಪಿಸಲು ಮೈಂಡ್ ಗೇಮ್ ಶುರುಮಾಡಿದ್ರಾ? ಎಂದೂ ಹೇಳಲಾಗುತ್ತಿದೆ.

ಕಡೆಕ್ಷಣದವರೆಗೂ ತಮ್ಮ ಸ್ಪರ್ಧಾ ಕ್ಷೇತ್ರದ ಮಾಹಿತಿ ಬಿಟ್ಟುಕೊಡದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಮಾತ್ರವಲ್ಲದೆ ಇವರ ಸೋಲು ಕೆಲ ಕಾಂಗ್ರೆಸ್ ನಾಯಕರಿಗೂ ಅಗತ್ಯವಾಗಿದೆ ಎಂಬ ಮಾಹಿತಿ ಇದೆ. ಇದರಿಂದ ಎಲ್ಲಾ ರೀತಿಯ ಸಾಧ್ಯತೆಗಳಿಗೂ ನಿಧಾನವಾಗಿ ತಮ್ಮ ಕ್ಷೇತ್ರ ಪ್ರಕಟಿಸುವುದೇ ಸೂಕ್ತ ಉತ್ತರ ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎನ್ನಲಾಗುತ್ತಿದೆ.

ನಟ ಎಸ್ ನಾರಾಯಣ್

ನಟ ಎಸ್ ನಾರಾಯಣ್ ಅರ್ಜಿ ಸಲ್ಲಿಕೆ:ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿ ನಿರ್ಮಾಪಕ ನಿರ್ದೇಶಕ ಹಾಗೂ ನಟ ಎಸ್ ನಾರಾಯಣ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಬೆಂಗಳೂರಿನ ಮಂಜುನಾಥ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಎಸ್ ನಾರಾಯಣ್ ಇದೀಗ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಕೆ ಮಾಡಿ ಕುತೂಹಲ ಮೂಡಿಸಿದ್ದಾರೆ.

2008ರಿಂದ ಸತತ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಈ ಬಾರಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದೆ ಎರಡು ಬಾರಿ ಮಾಜಿ ಮೇಯರ್ ಜಿ ಪದ್ಮಾವತಿ ಇವರ ವಿರುದ್ಧ ಸ್ಪರ್ಧಿಸಿ ಸೋತಿದ್ದರೆ ಇನ್ನೊಂದು ಬಾರಿ ಮಂಜುಳಾ ನಾಯ್ಡು ಸೋಲನುಭವಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಭದ್ರಕೋಟೆಯಾಗಿರುವ ರಾಜಾಜಿನಗರ ವಿಧಾನಸಭೆ ಕ್ಷೇತ್ರದಿಂದ ಈ ಬಾರಿ ಎಸ್ ನಾರಾಯಣ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ 2004ರ ನಂತರ ಕಳೆದುಕೊಂಡಿರುವ ತನ್ನ ಕ್ಷೇತ್ರವನ್ನು ಮರಳಿ ಪಡೆಯುವ ಯತ್ನಕ್ಕೆ ಮುಂದಾಗಿದೆ.

ಇದನ್ನೂ ಓದಿ:'ಕೈ' ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಶುರು; ಬಂಡಾಯ ಸ್ಪರ್ಧೆಗಿಲ್ಲ ಅವಕಾಶ

ABOUT THE AUTHOR

...view details