ಬೆಂಗಳೂರು:ಕೊರೊನಾ ರಾಜ್ಯದಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದ್ದು, ಮೈಸೂರು ಜಿಲ್ಲೆಯೂ ಅಪಾಯದಿಂದ ಹೊರತಾಗಿಲ್ಲ. ಈ ಮಧ್ಯೆ ಇಬ್ಬರು ಐಎಎಸ್ ಅಧಿಕಾರಿಗಳು ಪ್ರತಿಷ್ಠೆಗಾಗಿ ಕಿತ್ತಾಡಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದು, ಕೊರೊನಾ ಸಂದರ್ಭದಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ಮತ್ತು ಜನಪರವಾಗಿ ಕೆಲಸ ಮಾಡಬೇಕಾದ ಮೈಸೂರು ಜಿಲ್ಲಾಡಳಿತ ವಿವಾದದ ಕೇಂದ್ರ ಬಿಂದುವಾಗಿ ಬದಲಾಗಿರುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ. ಅವಧಿಗೆ ಮುನ್ನವೇ ನಿಯಮ ಬಾಹಿರ ವರ್ಗಾವಣೆಗಳ ಮೂಲಕ ಆಡಳಿತ ಯಂತ್ರವನ್ನು ದುರ್ಬಲಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತವೇ ಈ ಅಸ್ಥಿರತೆಗೆ ಕಾರಣ ಎಂದಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ಮೈಸೂರಿನ ಇಬ್ಬರು ಐಎಸ್ ಅಧಿಕಾರಿಗಳು ಎಳೆ ಮಕ್ಕಳಂತೆ ಕಚ್ಚಾಡುತ್ತಿದ್ದಾರೆ. ಸರ್ಕಾರಕ್ಕೆ ಅಧಿಕಾರಿಗಳ ಈ ವರ್ತನೆ ಸಾರ್ವಜನಿಕವಾಗಿ ನಗೆಪಾಟಲಾಗುತ್ತಿರುವುದು ಕಾಣಿಸುತ್ತಿಲ್ಲವೆ? ಐಎಎಸ್ ಅಧಿಕಾರಿಗಳು ತಮ್ಮ ಗಂಭೀರ ನಡೆಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಜನರ ಮುಂದೆ ಕೋತಿ ಕುಣಿತ ಮಾಡುತ್ತಿದ್ದರೆ ಅದಕ್ಕೆ ಬೆಲೆಯಿದೆಯೆ? ಎಂದು ಪ್ರಶ್ನಿಸಿದ್ದಾರೆ.