ಬೆಂಗಳೂರು:ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರವು ತನ್ನ ರಾಜಕೀಯ ದುರುದ್ದೇಶಕ್ಕೆ ಕರ್ನಾಟಕ ರಾಜ್ಯದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿಸಿ ಅವರ ಏಕತೆ ಒಡೆಯುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪ ಮಾಡಿದ್ದಾರೆ.
ರಾಜ್ಯದ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಬಹಿರಂಗ ಪತ್ರ ಬರೆದಿದ್ದು, ಭಾರತದ ‘ಮಾಹಿತಿ ತಂತ್ರಜ್ಞಾನದ ರಾಜಧಾನಿ’ ಬೆಂಗಳೂರು. ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಇತರ ವೃತ್ತಿಪರ ಕಾಲೇಜುಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ಭಾರತದ ‘ಶೈಕ್ಷಣಿಕ ಕೇಂದ್ರ ಸ್ಥಾನ’ವಾಗಿದೆ.
ಜೊತೆಗೆ ಈ ರಾಜ್ಯದಲ್ಲಿ ಯುವಕರಿಗೆ ಹೆಚ್ಚು ಉದ್ಯೋಗ ಸೃಷ್ಟಿಸುವ ಅವಕಾಶ ಹೊಂದಿರುವ ಹಿನ್ನೆಲೆಯಲ್ಲಿ ಕರ್ನಾಟಕವು ದೇಶದ ‘ಆರ್ಥಿಕ ಮತ್ತು ಸೇವಾ ಕೇಂದ್ರ’ವಾಗಿ ಹೊರಹೊಮ್ಮುತ್ತಿದೆ. ಬಹು ಭಾಷಾ, ಬಹು ಜನಾಂಗ, ಬಹು ಸಂಸ್ಕೃತಿಯ ಗುರುತು ಹೊಂದಿರುವ ಬೆಂಗಳೂರು ಹಾಗೂ ಕರ್ನಾಟಕ ನಮ್ಮ ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಿದೆ ಎಂದಿದ್ದಾರೆ.
ಪರೀಕ್ಷೆ ಮುಖ್ಯ:ಕೋವಿಡ್ ಪಿಡುಗು ಹಾಗೂ ಈ ಸವಾಲು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರದ ಅಸಮರ್ಥತೆ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಜ್ಞಾನ ಸಂಪಾದನೆಗೆ ಧಕ್ಕೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳು ಎದುರಾಗುತ್ತಿದ್ದು, ಅದರಲ್ಲೂ ಪಿಯುಸಿ ಪರೀಕ್ಷೆ ಬಹಳ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ, ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳ ನಡುವೆ ವೈಷಮ್ಯ ಸೃಷ್ಟಿಸಿ ಅವರ ಕೈಗೆ ಚಾಕು, ಚೂರಿ, ಕಲ್ಲುಗಳನ್ನು ಕೊಟ್ಟು ರಾಜ್ಯದ ವಿದ್ಯಾರ್ಥಿ ಸಮುದಾಯದ ಭವಿಷ್ಯವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರ. ದಯವಿಟ್ಟು ಇದನ್ನು ಮನದಟ್ಟು ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಜೀವನ ಆರಂಭವಾಗುವ ಮುನ್ನವೇ ಅದನ್ನು ಅಂತ್ಯಗೊಳಿಸಲಾಗುತ್ತಿದೆ. ಶೇ.40ರಷ್ಟು ಕಮಿಷನ್, ಕ್ರಿಪ್ಟೋ ಕರೆನ್ಸಿ ಹಗರಣ, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಬದಲಾವಣೆಗೆಗಾಗಿ ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬೇರೆ ದಾರಿ ಇಲ್ಲದೇ ಜನರ ಗಮನ ಬೇರೆಡೆಗೆ ಸೆಳೆಯಲು ನಮ್ಮ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.