ಬೆಂಗಳೂರು:ಬಿಜೆಪಿಯ ತಂತ್ರಗಾರಿಕೆ ಹಾಗೂ ಒಡೆದು ಆಳುವ ನೀತಿಯ ವಿರುದ್ಧ ಹಿಂದಿನಷ್ಟು ಸುಗಮವಾಗಿ ಸೆಣೆಸುವುದು ಕಷ್ಟ.ಕಳೆದ ಚುನಾವಣೆಯಷ್ಟು ಮುಂದಿನ ಚುನಾವಣೆ ಸುಲಭದ್ದಲ್ಲ, ಗೆಲುವಿಗಾಗಿ ಈಗಿನಿಂದಲೇ ಶ್ರಮಿಸಿ ಎಂದು ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಿಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ.
ಎರಡು ದಿನದ ಭೇಟಿ ಪ್ರಯುಕ್ತ ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಇಂದು ದಿನವಿಡೀ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ರಾಜೀವ್ ಗಾಂಧಿ ಭವನದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಮಧ್ಯಾಹ್ನ ಭೋಜನ ವಿರಾಮದ ವೇಳೆ ರಾಜ್ಯದಲ್ಲಿ ಮೊದಲ ಬಾರಿ ಆಯ್ಕೆಯಾಗಿರುವ 21 ವಿಧಾನಸಭೆ ಸದಸ್ಯರು ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಿದ್ದರು.
ನೂತನ ಶಾಸಕರ ಜೊತೆ ನಡೆಸಿದ ಸಂವಾದ ಸಂದರ್ಭದಲ್ಲಿ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿ. ಬಿಜೆಪಿ ಧರ್ಮ ಹಾಗೂ ಜಾತಿ ಒಡೆದು ಚುನಾವಣೆ ಎದುರಿಸುವ ಪ್ರಯತ್ನ ನಡೆಸಿದೆ. ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ಸೆಳೆಯುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಅಷ್ಟು ಸುಲಭ ಸಾಧ್ಯವಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸುವ ಜೊತೆಗೆ ಮತದಾರರಿಗೆ ಹತ್ತಿರವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಚುನಾವಣೆ ತಯಾರಿ ಆರಂಭಿಸಿ, ಗೆಲ್ಲಲು ರಣತಂತ್ರ ರೂಪಿಸಿ ಎಂದು ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಕರೆಕೊಟ್ಟರು.