ಕರ್ನಾಟಕ

karnataka

ETV Bharat / state

ಬೆಳಗಾವಿ ಅಧಿವೇಶನಕ್ಕೂ ಮುನ್ನ 'ಕೈ' ನಾಯಕರ ಮಹತ್ವದ ಸಭೆ; ಸರ್ಕಾರದ ವಿರುದ್ಧ ಹೋರಾಟಕ್ಕೆ ರೂಪುರೇಷೆ - ಚಳಿಗಾಲ ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ಸಭೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರವಾಸದಲ್ಲಿರುವ ಹಿನ್ನೆಲೆ ಈ ಸಂಬಂಧ ಮುಂದಿನ ವಾರ ಸಭೆ ನಡೆಸುವ ಸಾಧ್ಯತೆಯಿದೆ.

ಬೆಳಗಾವಿ ಅಧಿವೇಶನಕ್ಕೂ ಮುನ್ನ 'ಕೈ' ನಾಯಕರ ಮಹತ್ವದ ಸಭೆ; ಸರ್ಕಾರದ ವಿರುದ್ಧ ಹೋರಾಟಕ್ಕೆ ರೂಪು ರೇಷ
Congress Leader meeting before Belagavi session

By

Published : Nov 29, 2022, 12:10 PM IST

ಬೆಂಗಳೂರು: ಚಳಿಗಾಲ ಅಧಿವೇಶನ ಡಿಸೆಂಬರ್​ 19 ರಿಂದ 30ರವರೆಗೆ ಬೆಳಗಾವಿಯಲ್ಲಿ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಕೈಗೊಳ್ಳಬೇಕಾದ ಹೋರಾಟದ ರೂಪುರೇಷೆ ಹೆಣೆಯಲು ಕಾಂಗ್ರೆಸ್ ನಾಯಕರು ಸದ್ಯವೇ ನಗರದಲ್ಲಿ ಒಂದು ಸಭೆ ನಡೆಸಲಿದ್ದಾರೆ.

ಚುನಾವಣೆ ಹಿನ್ನೆಲೆ ಈ ಅಧಿವೇಶನವೂ ಕೂಡ ಮಹತ್ವದ್ದಾಗಿರುವ ಹಿನ್ನೆಲೆ ಕಾಂಗ್ರೆಸ್​ ಆಡಳಿತ ಪಕ್ಷ ವಿರುದ್ಧ ಹೋರಾಟಕ್ಕೆ ರೂಪುರೇಷೆ ಬಗ್ಗೆ ಸಿದ್ಧತೆ ನಡೆಸಲಿದೆ. ಈ ಸಂಬಂಧ ಚರ್ಚಿಸಲು ರಾಜ್ಯ ನಾಯಕರನ್ನು ಒಂದೆಡೆ ಕರೆಸಿ ಸಭೆ ನಡೆಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ. ಸದ್ಯ ಉಭಯ ನಾಯಕರು ಪ್ರವಾಸದಲ್ಲಿರುವ ಹಿನ್ನೆಲೆ ಈ ಸಂಬಂಧ ಮುಂದಿನ ವಾರ ಸಭೆ ನಡೆಸುವ ಸಾಧ್ಯತೆ ಇದೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ, ಇಲ್ಲವೇ ರೇಸ್​​ ಕೋರ್ಸ್​​​ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದರೆ ಈ ಸಭೆ ರೆಸಾರ್ಟ್​ಗೆ ಶಿಫ್ಟ್​ ಆಗುವ ಸಾಧ್ಯತೆ ಕೂಡ ಇದೆ.

ಬೆಳಗಾವಿ ಗಡಿ ವಿವಾದ: ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಹಾಗೂ ಜನಪರ ವಿಚಾರಗಳನ್ನು ಮುಂದಿಟ್ಟು ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಸದ್ಯ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ತಾರಕಕ್ಕೆ ಏರಿದ್ದು, ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಕನ್ನಡಿಗರ ಭಾವನೆಗೆ ಧಕ್ಕೆ ಉಂಟಾಗದಂತೆ, ಈ ಭಾಗದ ಜನರ ವಿಶ್ವಾಸ ಹೆಚ್ಚಿಸಿಕೊಳ್ಳುವ ರೀತಿ ಈ ಬಾರಿಯ ಅಧಿವೇಶನ ಬಳಸಿಕೊಳ್ಳುವ ಹೋರಾಟ ನಡೆಸುವ ಚಿಂತನೆ ನಡೆದಿದೆ.

ಸ್ಥಳೀಯ ಸಮಸ್ಯೆಗಳಿಗೆ ಒತ್ತು: ಇನ್ನು, ಬೆಳಗಾವಿ ಭಾಗದ ನಾಯಕರು ಸರ್ಕಾರದ ವಿರುದ್ಧ ನೀಡಿರುವ ಹೇಳಿಕೆ ಮುಂದಿಟ್ಟು ಹೋರಾಡಲು ಕೈ ನಿರ್ಧರಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ಹಿಂದೆ ನೀಡಿರುವ ಹೇಳಿಕೆಯನ್ನು ಆಧರಿಸಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ನಿರ್ಧರಿಸಿದೆ. ಎಂಇಎಸ್ ಪುಂಡಾಟಿಕೆ, ಕಬ್ಬು ಬೆಳೆಗಾರರ ಸಮಸ್ಯೆ, ಗಡಿ ಭಾಗದ ಜನರಿಗೆ ಆಗುತ್ತಿರುವ ಕಿರುಕುಳ, ಗಡಿ ಜಿಲ್ಲೆಗಳ ಅಭಿವೃದ್ಧಿಗೆ ತಾತ್ಸಾರ, ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ, 371 ಜೆ ಅಡಿ ಮುಂಬಡ್ತಿ, ಉದ್ಯೋಗ ನೀಡಿಕೆಯಲ್ಲಿ ಆದ ನಿರ್ಲಕ್ಷ್ಯ ಇತ್ಯಾದಿ ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ತೀರ್ಮಾನಿಸಿದೆ.

ಮತದಾರರ ಮಾಹಿತಿ ಕಳವು ಪ್ರಕರಣ ಚರ್ಚೆ..ಖಾಸಗಿ ಸಂಸ್ಥೆ ಮೂಲಕ ಮಹಾನಗರದ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದನ್ನು ಖಂಡಿಸಿ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಸಿಎಂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹಿನ್ನೆಲೆ ಇವರ ಗಮನಕ್ಕೆ ವಿಚಾರ ಬಂದಿದ್ದು, ಇವರು ರಾಜೀನಾಮೆ ನೀಡಬೇಕು, ನ್ಯಾಯಾಂಗ ತನಿಖೆ ಆಗಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಹೋರಾಡಲು ನಿರ್ಧರಿಸಿದೆ.

ಈ ಎಲ್ಲಾ ವಿಚಾರಗಳ ಕುರಿತು ಚರ್ಚಿಸಿ, ಯಾರು ಯಾವ ವಿಚಾರದ ಮೇಲೆ ಮಾತನಾಡಬೇಕು, ಯಾವ ಸಂದರ್ಭ ಹೋರಾಟಕ್ಕೆ ಇಳಿಯಬೇಕು, ಯಾವ ವಿಧದ ಹೋರಾಟ ನಡೆಸಬೇಕು. ಹೋರಾಟ ತೀವ್ರತೆ ಮೂಲಕ ಸರ್ಕಾರವನ್ನು ಮಣಿಸುವುದು ಹೇಗೆ ಎಂಬ ವಿಚಾರವಾಗಿ ನಗರದಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಇದಾದ ಬಳಿಕ ಸಾಧ್ಯವಾದರೆ ನಗರದಲ್ಲಿ ಇಲ್ಲವೇ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುವ ದಿನ ಬೆಳಗ್ಗೆ ಶಾಸಕಾಂಗ ಸಭೆ ನಡೆಸಿ ಶಾಸಕರಿಗೆ ವಿಷಯ ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.

ಹೋರಾಟ ಅನಿವಾರ್ಯ..ರಾಜ್ಯ ಸರ್ಕಾರ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃಧ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಕಳೆದ ಸಾರಿ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಲ್ಯಾಣ ಕರ್ನಾಟಕಕ್ಕೆ ಅನುದಾನ ಘೋಷಿಸಿದ್ದರು. ಆದರೆ ಅಭಿವೃದ್ಧಿ ಕಾರ್ಯ ಮಾತ್ರ ಆಗಿಲ್ಲ. ಜನಪ್ರಿಯತೆಗೋಸ್ಕರ ಪ್ರಕಟಣೆ ನೀಡುವ ಸರ್ಕಾರ ನಿಜವಾದ ಅಭಿವೃದ್ಧಿ ಮಾಡುತ್ತಿಲ್ಲ. ಕೇವಲ ದಾಖಲೆಗಳಿಗೆ ಮಾತ್ರ ಇವರ ಅಭಿವೃದ್ಧಿ ಸೀಮಿತವಾಗಿದೆ. ತಮ್ಮ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯ ಮಾಡುತ್ತಿದ್ದೇವೆ. ಈ ಸಾರಿ ಅಧಿವೇಶನದಲ್ಲಿಯೂ ಅದು ಮುಂದುವರಿಯಲಿದೆ ಎಂದು ಬೀದರ್ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಇದನ್ನೂ ಓದಿ:ಗಡಿವಿವಾದದ ಉರಿವ ಬೆಂಕಿಗೆ ಎಂಇಎಸ್ ತುಪ್ಪ; ಬೆಳಗಾವಿಗೆ ಬರುವಂತೆ 'ಮಹಾ' ಸಚಿವರಿಗೆ ಪತ್ರ

ABOUT THE AUTHOR

...view details