ಬೆಂಗಳೂರು: ಬಿಜೆಪಿಯವರ ಹೇಳಿಕೆಗಳೇ ವಿಷ ಕಾರುವಂತಿರುತ್ತದೆ. ಬಿಜೆಪಿಯ ಹುಟ್ಟು ಗುಣವೇ ವಿಷಕಾರುವುದು ಎಂದು ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ, ಯತ್ನಾಳ್, ಅಥವಾ ಮೋದಿಯೇ ಆಗಲಿ, ಬಿಜೆಪಿಯವರ ಹೇಳಿಕೆಗಳೇ ವಿಷ ಕಾರುವಂತಿರುತ್ತದೆ. ಹಳ್ಳಿ ಭಾಷೆಯಲ್ಲಿ ಖರ್ಗೆ ಹೇಳಿದ್ದಾರಷ್ಟೇ. ಇವರು ಕರ್ನಾಟಕದಲ್ಲಿ ದೊಂಬಿ ಗಲಾಟೆ ಮಾಡಿ ಚುನಾವಣೆ ಗೆಲ್ಲಲು ಅಮಿತ್ ಶಾ ಪ್ಲ್ಯಾನ್ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕರು ಪ್ರಚಾರದಲ್ಲಿ ವಿಷ ಕಾರ್ತಾರೆ. ಅದೇ ಅರ್ಥದಲ್ಲಿ ಖರ್ಗೆ ಹೇಳಿದ್ದು. ಸಿ.ಟಿ.ರವಿ, ಈಶ್ವರಪ್ಪ, ಯತ್ನಾಳ್ ಅವರು ತಮ್ಮ ಭಾಷಣದಲ್ಲಿ ವಿಷ ಕಾರ್ತಾರೆ. ಅದನ್ನು ಹಳ್ಳಿ ಮಾತಿನಲ್ಲಿ ಖರ್ಗೆ ಅವರು ಹೇಳಿದ್ದಾರಷ್ಟೇ. ಗೃಹ ಸಚಿವರು ಹೇಳಿದ್ರು, ಕಾಂಗ್ರೆಸ್ ಬಂದ್ರೆ ದೊಂಬಿ ಆಗುತ್ತೆ ಅಂತ. ಒಬ್ಬ ಗೃಹ ಸಚಿವರು ಹೀಗೆ ಹೇಳಬಹುದಾ? ಎಂದು ಪ್ರಶ್ನಿಸಿದರು. ಬಳಿಕ ಯತ್ನಾಳ್ ಅಂತಹವರಿಗೆ ಬಿಜೆಪಿಯವರು ತರಬೇತಿ ಕೊಟ್ಟಿರೋದೇ ಹಾಗೆ. ಅವರವರ ಭಾಷೆ ಅವರವರಿಗೆ. ಹೀಗಿರುವಾಗ ಅದಕ್ಕೆ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ಯುಪಿ ಮಾಡೆಲ್ ನಮಗೆ ಬೇಕಾಗಿಲ್ಲ: ಯೋಗಿ ಆದಿತ್ಯನಾಥ್ ಮೇಲೆ 27 ಗಂಭೀರ ಕೇಸ್ ಇತ್ತು. ಇವರ ರೋಲ್ ಮಾಡೆಲ್ ನಮಗೆ ಬೇಕಾಗಿಲ್ಲ. ಯುಪಿ ಮಾಡೆಲ್ ಮಾಡೋದು ನಮಗೆ ಅಗತ್ಯವಿಲ್ಲ. ನಮ್ಮ ಮಾಡೆಲ್ ಬೇಕಿದ್ದರೆ ಅವರು ಮಾಡಿಕೊಳ್ಳಲಿ. ಬಿಜೆಪಿಯವರದ್ದು ದಿವಾಳಿತನದ ಪರಮಾವಧಿ. ಅವರ ಸರ್ಕಾರ ಬಂದ ಮೇಲೆ ಕೇಸ್ ವಾಪಸ್ ಪಡೆದಿದೆ. ಇದು ಬಸವಣ್ಣ, ಕನಕ, ದಾಸರ ನಾಡಿದು. ಇಲ್ಲಿ ಉತ್ತರ ಪ್ರದೇಶ ಮಾಡೆಲ್ ಅವಶ್ಯಕತೆ ಇಲ್ಲ ಎಂದರು.