ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ನಗರದಲ್ಲಿ ಬಿಜೆಪಿಯ ನಾಯಕರ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸದಸ್ಯರಿಂದ ವಿನೂತನ ಪ್ರತಿಭಟನೆ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಂಸದ ತೇಜಸ್ವಿ ಸೂರ್ಯ, ಸಚಿವ ಸಿ.ಟಿ.ರವಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ಕಾಯ್ದೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಬಿಜೆಪಿ ಈ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ದುರಹಂಕಾರದ ವರ್ತನೆಯನ್ನು ತೋರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮನೋಹರ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ನಾಲ್ಕು ಅಕ್ಷರ ಬಾರದವರು, ಪಂಚರ್ ಅಂಗಡಿ ಇಟ್ಟಿರುವವರು ಹೋರಾಟ ನಡೆಸುತ್ತಿದ್ದಾರೆ ಎಂಬ ಹೇಳಿಕೆ ಮೂಲಕ ಮತದಾರರು ಹಾಗೂ ನಾಗರಿಕರನ್ನು ಅವಮಾನಿಸಿದ್ದಾರೆ. ಸಂಸದರಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಈ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.
ಸಚಿವ ಸಿ.ಟಿ.ರವಿ ಹಾಗೂ ಶಾಸಕ ರೇಣುಕಾಚಾರ್ಯ ಮತ್ತು ಪಿ.ರಾಜೀವ್ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿನಾ ಕಾರಣ ಪಾಕಿಸ್ತಾನ, ಭಯೋತ್ಪಾದಕರ ಹೆಸರನ್ನು ಪ್ರಸ್ತಾಪಿಸಿ ದೇಶದ ಜನರ ಭಾವನೆಯನ್ನು ಕದಲಿಸುತ್ತಿದ್ದಾರೆ. ಇವರ ಹೇಳಿಕೆ ಸಮಾಜದ ಶಾಂತಿಗೆ ಭಂಗ ತರುವಂತದ್ದಾಗಿದೆ. ಶಾಂತಿ ಕದಡುವ ಹೇಳಿಕೆ ನೀಡಿ ಕೋಮುಭಾವನೆ ಕೆರಳಿಸಿ ಸಮಾಜದ ಸ್ವಾಸ್ಥ್ಯವನ್ನು ಇವರು ಹಾಳುಗೆಡವುತ್ತಿದ್ದಾರೆ. ಇವರ ಹೇಳಿಕೆ ಹಾಗೂ ವರ್ತನೆಯನ್ನು ಖಂಡಿಸಿ ಇಂದು ನಾವು ಬಿಜೆಪಿಯ ಪಂಚರ್ ಅಂಗಡಿ ತೆರೆದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದರು.