ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿಮತ್ತೆ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದು ಉಪ ಕದನದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಕೊನೆಯ ಕ್ಷಣದಲ್ಲಿ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ತಂತ್ರಗಳನ್ನು ಹೆಣೆಯತೊಡಗಿವೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಹಸ್ತಕ್ಕೆ ಜೆಡಿಎಸ್ ಬೆಂಬಲ ನೀಡುವ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ತೆನೆ ಹೊತ್ತ ಮಹಿಳೆ ಚಿನ್ಹೆಗೆ ಬೆಂಬಲ ನೀಡುವ ಬಗ್ಗೆ ಉಭಯ ಪಕ್ಷಗಳ ಮುಖಂಡರ ನಡುವೆ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿನ ಬದಲಾದ ರಾಜಕೀಯ ಬೆಳವಣಿಗೆಗಳಿಂದ ರಾಜ್ಯದಲ್ಲಿಯೂ ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರಲ್ಲಿ ಹೊಸ ಆಶಾಭಾವನೆ ಮೂಡಿದಂತಿದೆ.
ರಾಜ್ಯದಲ್ಲಿ ಡಿ 5ರಂದು 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಮಾಜಿ ಮೈತ್ರಿ ಪಕ್ಷಗಳು ಮತ್ತೆ ಮರು ಮೈತ್ರಿ ಮಾಡಿಕೊಂಡು ದೋಸ್ತಿ ಸರ್ಕಾರ ರಚನೆಯ ಕಸರತ್ತು ನಡೆಸುವ ಕಾರ್ಯ ತಂತ್ರ ರೂಪಿಸುತ್ತಿದ್ದಾರೆ.