ಬೆಂಗಳೂರು:ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಲಭೆ, ಗದ್ದಲಗಳನ್ನು ಸೃಷ್ಟಿಸಿ ಉಪಚುನಾವಣೆ ಶಾಂತಿಯುತವಾಗಿ ನಡೆಯದಂತೆ ಮಾಡಲು ಕ್ಷೇತ್ರದ ಹೊರಗಿನಿಂದ ಮೂರ್ನಾಲ್ಕು ಸಾವಿರ ಜನರನ್ನು ಕಾಂಗ್ರೆಸ್ ನಾಯಕರು ಕರೆತಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಮಖಂಡರ ಕಾಂಗ್ರೆಸ್ ಸೇರ್ಪಡೆ ವೇಳೆ ಮಾತನಾಡಿದ ಅವರು, ಆರ್.ಆರ್.ನಗರ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಯಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಹೊರಗಿನಿಂದ ಬಂದವರು ಶಾಂತಿಯುತ ಚುನಾವಣೆ ನಡೆಯಬಾರದು, ಗೊಂದಲ, ಗಲಭೆ ಸೃಷ್ಟಿಸಿ ಬಿಜೆಪಿ ಪಕ್ಷದವರು ನಮಗೆ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಆರೋಪ ಹೊರಿಸಿ ಅನುಕಂಪ ಪಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಯಯುತ ಚುನಾವಣೆಗೆ ನಾವು ಸಿದ್ದರಿದ್ದೇವೆ, ನೀವೂ ಕೂಡ ನ್ಯಾಯಯುತವಾಗಿ ಚುನಾವಣೆ ಎದುರಿಸಲು ಸಿದ್ದರಾಗಬೇಕು. ನಾವು ಕೆಟ್ಟವರು ಎಂದು ಬಿಂಬಿಸಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಜೆ.ಪಿ.ಪಾರ್ಕ್‌ನಲ್ಲಿ ಪ್ರತಿ ಮನೆಗೆ ಹೋಗಿ ಓಟರ್ ಐಡಿ ಪಡೆದು ಒಂದು ಕಡೆ ಇರಿಸಿ ಇದನ್ನು ಮುನಿರತ್ನ ಮಾಡುತ್ತಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ. ಮಾಜಿ ಸಂಸದ ಧ್ರುವ ನಾರಾಯಣ ನೇತೃತ್ವದಲ್ಲಿ ಈಗ ನಂದಿನಿ ಲೇಔಟ್ ನಲ್ಲಿಯೂ ಅದೇ ರೀತಿ ಮಾಡಲಾಗುತ್ತಿದೆ. ಜಾತಿ, ಧರ್ಮದ ದೂರವಾಣಿ ಸಂಖ್ಯೆ ಪಡೆದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಕ್ಷೇತ್ರದಲ್ಲಿ ಹಲ್ಲೆ, ದೊಂಬಿ ನಡೆದಿಲ್ಲ, ಇದು ಶಾಂತಿಯುತ ಕ್ಷೇತ್ರ. ಇದನ್ನು ಹೀಗೆಯೇ ಉಳಿಸಿ ಎಂದು ಮನವಿ ಮಾಡಿದರು.
ಮೂರರಿಂದ ನಾಲ್ಕು ಸಾವಿರ ಜನ ಹೊರಭಾಗದಿಂದ ಬಂದಿದ್ದಾರೆ. ಇಷ್ಟು ಜನ ಹೊರಭಾಗದಿಂದ ಬಂದು ಚುನಾವಣಾ ಕೆಲಸ ಮಾಡುವ ಅಗತ್ಯವಿಲ್ಲ. ವಿದ್ಯಾವಂತರ ಕ್ಷೇತ್ರದಲ್ಲಿ ಹೊರಗಡೆಯವರು ಬಂದು ಕೆಲಸ ಮಾಡಬೇಕಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಮುನಿರತ್ನ ಮನವಿ ಮಾಡಿದರು.