ಕರ್ನಾಟಕ

karnataka

ETV Bharat / state

ಮೂರು ವರ್ಷದಲ್ಲಿ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಅಳಿದು ಹೋಗಲಿದೆ.. ಸಚಿವ ಕಾರಜೋಳ ಭವಿಷ್ಯ - ಸಚಿವ ಗೋವಿಂದ ಕಾರಜೋಳ

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಸಂವಿಧಾನ ದಿನ ಆಚರಿಸಲಾಯಿತು. ಈ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು..

minister govind karjol
ಸಚಿವ ಗೋವಿಂದ ಕಾರಜೋಳ

By

Published : Nov 26, 2021, 6:29 PM IST

ಬೆಂಗಳೂರು :ದೀನ ದಲಿತರು ವಿದ್ಯಾವಂತರಾಗಿ ಅವರ ಜೀವನವನ್ನು ರೂಪಿಸಿಕೊಳ್ಳಬೇಕೆಂಬ ಆಶಯವನ್ನು ಅಂಬೇಡ್ಕರ್​ ಹೊಂದಿದ್ದರು. ಅವರು ಅಕ್ಕಿ, ಕೋಳಿ ಕೊಡಿ ಎಂದ್ಹೇಳಿರಲಿಲ್ಲ. ಆದರೆ, ಕಾಂಗ್ರೆಸ್​​ ದಲಿತರಿಗೆ ಅಕ್ಕಿ, ಕುರಿ, ಕೋಳಿ ಕೊಟ್ಟು ಸ್ವಾಭಿಮಾನ ಮತ್ತು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.

ಕಾಂಗ್ರೆಸ್‌ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿರುವುದು..

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಎಸ್ಸಿ ಮೋರ್ಚಾದಿಂದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಗೌರವ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ದೇಶಕ್ಕೆ ಧರ್ಮಗ್ರಂಥ ಅಂದರೆ ಸಂವಿಧಾನ.

ಈ ಸಂವಿಧಾನದಿಂದಲೇ ನನ್ನಂತ ಸಾಮಾನ್ಯ ವ್ಯಕ್ತಿ ಪ್ರಧಾನಿಗಳಾಗಿದ್ದು ಎಂದೂ ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಸ್ವತಂತ್ರ ನಂತರ ಅಧಿಕಾರಕ್ಕೆ ಬಂದವರು ಅಂಬೇಡ್ಕರ್ ಆಶಯವನ್ನು ನೆರವೇರಿಸಿಲ್ಲ ಎಂದರು.

ಅಂಬೇಡ್ಕರ್ ಅವರಿಗೆ ಸಲ್ಲಿಸಬೇಕಾದ ಎಲ್ಲಾ ಗೌರವಗಳನ್ನು ನರೇಂದ್ರ ಮೋದಿ ಸಲ್ಲಿಸಿದ್ದು, ಅಂಬೇಡ್ಕರ್‌ ಅವರು ಹುಟ್ಟಿ ಬೆಳೆದ ಮನೆ, ವಾಸದ ಮನೆ ಮತ್ತು ಕಚೇರಿಯನ್ನು ಸ್ಮಾರಕವಾಗಿಸಿ ಸಂರಕ್ಷಿಸುವ ಕೆಲಸ ಮಾಡಿದ್ದಾರೆ.

ವಿದೇಶದಲ್ಲಿ ಅಂಬೇಡ್ಕರ್‌ ವ್ಯಾಸಂಗ ಮಾಡಿದ್ದ ಸಂದರ್ಭದಲ್ಲಿ ಉಳಿದಿದ್ದ ಮನೆಯ ಕಟ್ಟಡವನ್ನೇ ಖರೀದಿಸಿ ಅಲ್ಲಿ ಈಗ ಭಾರತೀಯ ವಿದ್ಯಾರ್ಥಿಗಳು ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಬಾಬಾ ಸಾಹೇಬರ ನೆನಪು ವಿದ್ಯಾರ್ಥಿಗಳಲ್ಲಿ ಇರಲಿ ಎಂಬ ಆಶಯ ಪ್ರಧಾನಿಯವರದ್ದು ಎಂದು ಹೇಳಿದರು.

ವೋಟ್​ ಬ್ಯಾಂಕ್​​ಗಾಗಿ ಬಳಕೆ :ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಆಡಳಿತ ಮಾಡಿದವರಿಗೆ ಅಂಬೇಡ್ಕರ್ ಇದ್ದರು ಎನ್ನುವ ನೆನಪು ಕೂಡ ಇರಲಿಲ್ಲ. ಈ ದೇಶದಲ್ಲಿ ದೀನ-ದಲಿತರನ್ನು ಕಾಂಗ್ರೆಸ್​ನವರು ಮತ ಬ್ಯಾಂಕ್ ಆಗಿ ಉಪಯೋಗಿಸಿಕೊಂಡರು.

ಜಾತಿ-ಜಾತಿ ನಡುವೆ,ಧರ್ಮ-ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸುವ ಕೆಲಸ ಮಾಡಿ ದೀನ-ದಲಿತರು, ಅಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿರಿಸಿ ಮತ ಬ್ಯಾಂಕ್ ಆಗಿ ಮಾಡಿಕೊಂಡರು. ಇವರ ಈ ಕೆಲಸದಿಂದಾಗಿ ದಲಿತ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ದೇಶದ ಉದ್ದಗಲಕ್ಕೂ ಇಂದು ದಲಿತರು ವಿದ್ಯಾವಂತರಾಗುತ್ತಿದ್ದಾರೆ. ಇದನ್ನು ಸ್ವಾತಂತ್ರ್ಯ ಬಂದ ನಂತರ ಅಂದೇ ಮಾಡಿದ್ದರೆ ಪುಣ್ಯದ ಕೆಲಸ ಆಗುತ್ತಿತ್ತು. 10 ವರ್ಷದಲ್ಲಿ ಅಸ್ಪೃಶ್ಯತೆಯ ಆಚರಣೆ ಹೋಗಬೇಕು. ದೀನ ದಲಿತರು ವಿದ್ಯಾವಂತರಾಗಬೇಕೆಂಬ ಆಶಯ ಹೊಂದಿದ್ದರು.

ಶಿಕ್ಷಣ, ಸಂಘಟನೆ,ನ್ಯಾಯಯುತ ಹಕ್ಕುಗಳಿಗೆ, ಸಂವಿಧಾನಾತ್ಮಕವಾಗಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡಬೇಕು ಎಂಬುದು ಅಂಬೆಡ್ಕರ್​ ಆಶಯವಾಗಿತ್ತು. ಆದರೆ, ಎಲ್ಲಿ ದೀನ-ದಲಿತರು ವಿದ್ಯಾವಂತರಾದರೆ ನಮ್ಮ ಕೈಬಿಡುತ್ತಾರೋ ಎಂದು ಕಾಂಗ್ರೆಸ್​ ಅಂಜಿ ಅವರನ್ನು ವಿದ್ಯಾವಂತರಾಗಲು ಬಿಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪಳೆಯುಳಿಕೆಯಂತಿರುವ ಕಾಂಗ್ರೆಸ್ ನಶಿಸಲಿದೆ :ಮೂರು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಅಳಿದು ಹೋಗಲಿದೆ. ಮೋದಿಯವರು ಕಾಲಜ್ಞಾನಿಯಂತೆ ಕಾಂಗ್ರೆಸ್‌ ಮುಕ್ತ ಭಾರತದ ಬಗ್ಗೆ ಹೇಳಿದರು. ಅದೀಗ ನಿಜವಾಗುತ್ತಿದೆ. ಕಾಂಗ್ರೆಸ್‌ ಮುಕ್ತ ಭಾರತವೆಂದರೆ, ಬಿಜೆಪಿ ಮಾತ್ರ ಅಧಿಕಾರದಲ್ಲಿ ಇರುವುದು ಅಂತಾ ಅಲ್ಲ. ದಲಿತರ ಕಲ್ಯಾಣ, ಸಮಾನತೆ ಮತ್ತು ಈ ವರ್ಗದ ಏಳಿಗೆಯಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.

ಕಾಂಗ್ರೆಸ್ ರಾಜಕೀಯ ಪಕ್ಷ ಅಲ್ಲ :ಸ್ವಾತಂತ್ರ್ಯ ಪಡೆಯಲು ಬ್ರಿಟಿಷರ ವಿರುದ್ಧ ಹೋರಾಡಲು ಕಾಂಗ್ರೆಸ್ ಎನ್ನುವ ಒಂದು ಸಂಸ್ಥೆಯನ್ನು ಹುಟ್ಟು ಹಾಕಲಾಗಿತ್ತು. ಸ್ವಾತಂತ್ರ ಬಂದ ನಂತರ ಮಹಾತ್ಮ ಗಾಂಧೀಜಿ ಹರಿಜನ ಪತ್ರಿಕೆಯ ಸಂಪಾದಕೀಯದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಹಾಗಾಗಿ, ಕಾಂಗ್ರೆಸ್ ಅವಶ್ಯಕತೆ ಇಲ್ಲ, ಯಾವ ಉದ್ದೇಶಕ್ಕಾಗಿ ಸಂಘಟನೆ ಹುಟ್ಟು ಹಾಕಿದ್ದೆವೋ ಅದು ಈಡೇರಿದೆ.

ಹಾಗಾಗಿ, ಸಂಘಟನೆ ವಿಸರ್ಜನೆ ಮಾಡಬೇಕು ಎಂದಿದ್ದರು. ಕಳ್ಳಕಾಕರು ಸೇರಿಕೊಂಡು ಸಂಸ್ಥೆಯ ಹೆಸರು ಹಾಳಾಗಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಗಾಂಧೀಜಿ ಸಂಪಾದಕೀಯದಲ್ಲಿ ಬರೆದಿದ್ದರು. ಇದು ಅವರ ಕಡೆಯ ಸಂಪಾದಕೀಯ ಕೂಡ. ಆದರೆ, ಅದನ್ನೇ ಪಕ್ಷ ಮಾಡಿ ಮುಂದುವರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ನಿಗೂಢ ಶಬ್ದವು ಭೂಕಂಪದ ಮುನ್ಸೂಚನೆಯಲ್ಲ, ಭಯಬೇಡ : ಸಚಿವ ಆರ್. ಅಶೋಕ್

ABOUT THE AUTHOR

...view details