ಕರ್ನಾಟಕ

karnataka

ETV Bharat / state

ಬಿಜೆಪಿಯದ್ದು ಧರ್ಮ ರಾಜಕಾರಣ.. ನಮ್ಮದು ಅಭಿವೃದ್ಧಿ ಸಿದ್ಧಾಂತ: ದಿಗ್ವಿಜಯ್ ಸಿಂಗ್ - ಜೈರಾಮ್​ ರಮೇಶ್​ಗೆ ಮುಜುಗರ

ಕರ್ನಾಟಕದಲ್ಲಿ 21 ದಿನಗಳ ಕಾಲ ಭಾರತ್ ಜೋಡೋ ಯಾತ್ರೆ ನಡೆಯಲಿದೆ. ಸಾವಿರಾರು ಜನ ಇದರಲ್ಲಿ ಪಾಲ್ಗೊಳ್ಳಬಹುದು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ಇದೊಂದು ಯಾತ್ರೆ ಎಲ್ಲರನ್ನೂ ತಲುಪಲಿದೆ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದರು.

congress-held-bharat-jodo-yatra-meeting-in-bengaluru
ಬಿಜೆಪಿಯದ್ದು ಧರ್ಮ ರಾಜಕಾರಣ.. ನಮ್ಮದು ಸರ್ವರನ್ನೊಳಗೊಂಡ ಅಭಿವೃದ್ಧಿ ಸಿದ್ಧಾಂತ

By

Published : Sep 1, 2022, 6:33 PM IST

Updated : Sep 1, 2022, 6:42 PM IST

ಬೆಂಗಳೂರು:ದೇಶದಲ್ಲಿ ಈಗ ಮತೀಯ ವಿಚಾರ ಇಟ್ಕೊಂಡು ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿಯದ್ದು ಧರ್ಮ ರಾಜಕಾರಣ. ಆದರೆ ನಮ್ಮದು ಸರ್ವರನ್ನೊಳಗೊಂಡ ಅಭಿವೃದ್ಧಿ ಸಿದ್ಧಾಂತ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿಂದು ಭಾರತ್ ಜೋಡೋ ಯಾತ್ರೆ ಕುರಿತ ಕೆಪಿಸಿಸಿ ಪದಾಧಿಕಾರಿಗಳು, ನಾನಾ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಸಮನ್ವಯಕಾರರು, ಹಿರಿಯ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೊಡೋ ಯಾತ್ರೆ ದೊಡ್ಡ ಕಾರ್ಯಕ್ರಮ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿಯುವ ಈ ಯಾತ್ರೆ ಸಿದ್ಧಾಂತಗಳ ಮೇಲೆ ನಡೆಯಲಿದೆ ಎಂದರು.

ಸರ್ವಧರ್ಮ ಸಹಬಾಳ್ವೆ ನಮ್ಮ ಪಕ್ಷದ ಸಿದ್ಧಾಂತ. ಅದನ್ನು ಮುಂದಿಟ್ಟುಕೊಂಡೇ ಯಾತ್ರೆ ನಡೆಯಲಿದೆ. ಭ್ರಷ್ಟಾಚಾರ, ಜಿಎಸ್​ಟಿ, ನಿರುದ್ಯೋಗ ಬಡತನ ಇವುಗಳನ್ನು ಇಟ್ಟುಕೊಂಡು ಯಾತ್ರೆ ಮಾಡುತ್ತೇವೆ. ದೇಶದ ಜನರನ್ನೂ ಒಂದುಗೂಡಿಸಲು ಹೊರಟಿದ್ದೇವೆ ಎಂದು ಹೇಳಿದರು.

ಕರ್ನಾಟಕದಲ್ಲಿ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಸಾವಿರಾರು ಜನ ಇದರಲ್ಲಿ ಪಾಲ್ಗೊಳ್ಳಬಹುದು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ಇದೊಂದು ಯಾತ್ರೆ ಎಲ್ಲರನ್ನೂ ತಲುಪಲಿದೆ. ಹಳ್ಳಿ, ಗ್ರಾಮ, ತಾಂಡ, ಕೇರಿ ಎಲ್ಲವನ್ನೂ ಸುತ್ತಲಿದೆ ಎಂದರು.

ಜೈರಾಮ್​ ರಮೇಶ್ ಮಾತನಾಡಿ, ಮೇ 16ರಂದು ಭಾರತ್ ಜೊಡೋ ಯಾತ್ರೆ ಬಗ್ಗೆ ಸೋನಿಯಾ ಗಾಂಧಿ ಘೋಷಣೆ ಮಾಡಿದರು. ಒಟ್ಟಾರೆ 3,570 ಕಿ.ಮೀ ದೂರ ಈ ಯಾತ್ರೆ ಇರಲಿದೆ. 12 ರಾಜ್ಯಗಳಲ್ಲಿ ಸಾಗಲಿದೆ. ತಮಿಳುನಾಡಿನಲ್ಲಿ 3 ದಿನ, ಕೇರಳ-18 ದಿನ, ಕರ್ನಾಟಕ-21 ದಿನ, ತೆಲಂಗಾಣ-21 ದಿನ, ಆಂಧ್ರ-3 ದಿನ, ಮಹಾರಾಷ್ಟ್ರ-16 ದಿನ, ಮಧ್ಯಪ್ರದೇಶ-16 ದಿನ, ರಾಜಸ್ಥಾನ-21 ದಿನ, ಉತ್ತರಪ್ರದೇಶ-3 ದಿನ, ಹರಿಯಾಣ- 2 ದಿನ, ಜಮ್ಮು-ಕಾಶ್ಮೀರ- 2 ದಿನ ಈ ಯಾತ್ರೆ ಸಾಗಲಿದೆ ಎಂಬುದರ ಕುರಿತು ಮಾಹಿತಿ ನೀಡಿದರು.

ಮೋದಿ ಮಾರಿಕೊಂಡು ತಿನ್ನುತ್ತಿದ್ದಾರೆ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಟೆಕ್ನಾಲಜಿ ಬೆಳೆಯಬೇಕು. ಶಿಕ್ಷಣ ಎಲ್ಲರಿಗೆ ಸಿಗಬೇಕು. ಇದು ರಾಜೀವ್ ಗಾಂಧಿಯವರು ಬಯಸಿದ್ದು. ಇವತ್ತು ಇವನ್ನೆಲ್ಲ ಪ್ರಧಾನಿ ಮೋದಿ ಮಾರಿಕೊಂಡು ತಿನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಗೋದಿ, ಬೆಲ್ಲ ಮಾರಾಟ ಮಾಡುತ್ತಿದ್ದ ಅದಾನಿ ಜಗತ್ತಿನ ಮೂರನೇ ಶ್ರೀಮಂತನಾಗಿದ್ದಾರೆ. ಯಾರು ಇವರಿಗೆ ಸಹಾಯ ಮಾಡಿದ್ದು, ಇದೇ ಮೋದಿ. ಪಾದಯಾತ್ರೆಯು ದೇಶದ ಉಳಿವಿಗಾಗಿ ಮಾಡಲಾಗುತ್ತಿದೆ. ಲೋಕತಂತ್ರ, ಪ್ರಜಾತಂತ್ರ ಉಳಿವಿಗೆ ಈ ಜೊಡೋದಲ್ಲಿ ಭಾಗಿಯಾಗಬೇಕು. ಬ್ರಿಟಿಷರ ಜೊತೆ ಸೇರಿದವರನ್ನು ಇಂದು ಹೊಗಳುತ್ತಿದ್ದಾರೆ ಎಂದು ಸಾವರ್ಕರ್​ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಆತಂಕದ ವಾತಾವರಣವಿದೆ:ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ಆತಂಕದ ವಾತಾವರಣವಿದೆ. ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ವಾಜಪೇಯಿಯವರು ಪ್ರಧಾನಿಯಾದಗಲೇ ಸಂವಿಧಾನ ಪುನಾರಚನೆಗೆ ಹೊರಟಿದ್ದರು. ಆದರೆ, ಆಗ ನಾರಾಯಣನ್​ ರಾಷ್ಟ್ರಪತಿಗಳಾಗಿದ್ದರು. ಹಾಗಾಗಿ ಪುನಾರಚನೆಗೆ ಅವಕಾಶ ಸಿಗಲಿಲ್ಲ. ಸಂವಿಧಾನ ಬದಲಾವಣೆ ಮಾಡಬೇಕೆಂಬುದು ಬಿಜೆಪಿಯವರ ಮನಸ್ಥಿತಿ. ಅದು ಬಿಜೆಪಿ ಸಂಸದ ಅನಂತ್ ಕುಮಾರ ಹೆಗಡೆ ಬಾಯಲ್ಲಿ ಬಂದಿದೆ. ಪ್ರಜಾಪ್ರಭುತ್ವ ಉಳಿಸುವ ಕೆಲಸ ಈಗ ಆಗಬೇಕಿದೆ ಎಂದು ಹೇಳಿದರು.

ಜೈರಾಮ್​ ರಮೇಶ್​ಗೆ ಮುಜುಗರ:ಭಾಷಣದ ವೇಳೆಜೈರಾಮ್​ ರಮೇಶ್​ಗೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಮುಜುಗರ ಎದುರಾಯಿತು. ಕನ್ನಡದಲ್ಲಿ ಭಾಷಣ ಮಾಡುವಂತೆ ಕಾರ್ಯಕರ್ತರು, ಮುಖಂಡರು ಕೂಗು ಎಬ್ಬಿಸಿದರು. ಇದರಿಂದ ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದ ಅವರಿಗೆ ಇರುಸು ಮುರುಸು ಉಂಟುಮಾಡಿತು.

ಈ ವೇಳೆ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ ಅವರು, ಇದು ಮನ್ ಕಿ ಬಾತ್ ಅಲ್ಲ. ಇದು ಜನತಾ ಕಿ ಚಿಂತನ್ ಯಾತ್ರೆ. ಭಾರತ್ ಜೊಡೋದಲ್ಲಿ ಯಾವುದೇ ಭಾಷಣ ಇಲ್ಲ. ಪ್ರಧಾನಿಯವರ ವಿರುದ್ಧ ಘೋಷಣೆ ಕೂಗುವುದಲ್ಲ. ಜನರ ಸಮಸ್ಯೆಗಳನ್ನು ಅರಿಯುವ ಕಾರ್ಯಕ್ರಮ. ಪಾದಯಾತ್ರೆ ವೇಳೆ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಲಾಗುತ್ತದೆ. ನರೇಗಾ ಕೂಲಿ ಕಾರ್ಮಿಕರನ್ನು ಭೇಟಿ ಮಾಡುತ್ತೇವೆ. ಅವರ ಸಮಸ್ಯೆಗಳನ್ನು ಆಲಿಸುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಎಐಸಿಸಿ ಕಾರ್ಯದರ್ಶಿ ರೋಜಿ ಎಂ ಜಾನ್, ಪಿ.ಸಿ ವಿಷ್ಣುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ರಾಮಲಿಂಗರೆಡ್ಡಿ, ಧ್ರುವನಾರಾಯಣ್, ಹಿರಿಯ ಮುಖಂಡರಾದ ಹೆಚ್.ಕೆ.ಪಾಟೀಲ್, ಕೆ.ಜೆ. ಜಾರ್ಜ್, ಯು.ಟಿ. ಖಾದರ್, ಅಲ್ಲಂ ವೀರಭದ್ರಪ್ಪ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ:ರಾಜ್ಯದಲ್ಲೂ ಕಾಂಗ್ರೆಸ್​​ ನಾಯಕರ ಸಾಲು ಸಾಲು ರಾಜೀನಾಮೆ?

Last Updated : Sep 1, 2022, 6:42 PM IST

ABOUT THE AUTHOR

...view details