ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷ "ಮತ್ತೆ ಘರ್ಜಿಸಲಿದೆ ಕರ್ನಾಟಕ" ಎಂಬ ಹೊಸ ಕ್ಯಾಂಪೇನ್ ಆರಂಭಿಸಿದೆ. ಈ ಅಭಿಯಾನಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ಚಾಲನೆ ನೀಡಿ ಲೋಗೋ ಬಿಡುಗಡೆ ಮಾಡಿದ್ದಾರೆ. ಈ ಅಭಿಯಾನವು ಕರ್ನಾಟಕದ ಜನರಿಗೆ ಪಕ್ಷದ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸುವ ದೂರದೃಷ್ಟಿಯನ್ನು ಹೊಂದಿದೆ ಎಂದರು.
"ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಜನರು ನಿರಾಸೆಗೊಂಡಿದ್ದಾರೆ. ಅವರು ಕೋವಿಡ್-19, ಆರ್ಥಿಕ ಕುಸಿತ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿಯಿಂದ ಕರ್ನಾಟಕಕ್ಕಾದ ಅನ್ಯಾಯವನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಹೀಗಾಗಿ ಕನ್ನಡಿಗರ ಈ ಸವಾಲುಗಳನ್ನು ಎದುರಿಸಲು ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ." ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
"ಕರ್ನಾಟಕ ಮತ್ತೊಮ್ಮೆ ಘರ್ಜಿಸುತ್ತದೆ" ಅಭಿಯಾನವು ಕರ್ನಾಟಕದ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ರಾಜ್ಯದ ಭವಿಷ್ಯಕ್ಕಾಗಿ ಪಕ್ಷದ ದೃಷ್ಟಿಕೋನವನ್ನು ಹಂಚಿಕೊಳ್ಳಲು ಗಮನ ನೀಡುತ್ತದೆ. ಈ ಅಭಿಯಾನವು ರ‍್ಯಾಲಿಗಳು, ಮನೆ-ಮನೆ ಪ್ರಚಾರ, ಸಾಮಾಜಿಕ ಮಾಧ್ಯಮಗಳ ಪ್ರಚಾರ ಮತ್ತು ಕನ್ನಡಿಗರ ನಾಡಿ ಮಿಡಿತ ಹಾಗೂ ಅವರಿಗಾದ ಅನ್ಯಾಯವನ್ನು ಸರಿಪಡಿಸಿ ಮತ್ತೆ ಕರ್ನಾಟಕವು ಘರ್ಜಿಸುವಂತೆ ಮಾಡುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಇದು ಒಳಗೊಂಡಿರುತ್ತದೆ.