ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರು:ಭರವಸೆ ಈಡೇರಿಸಿದ ಇತಿಹಾಸವೇ ಕಾಂಗ್ರೆಸ್ಗೆ ಇಲ್ಲ. ಇಂತಹ ಕಾಂಗ್ರೆಸ್ ಈಗ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಉಚಿತ ಭರವಸೆ ನೀಡುತ್ತಿದೆ. ಅವರ ಈಡೇರಿಕೆ ಅಸಾಧ್ಯವಾಗಿದ್ದು, ಕಾಂಗ್ರೆಸ್ನ ಭರವಸೆ ನಂಬಬೇಡಿ ಎಂದು ರಾಜ್ಯದ ಜನತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಲ್ಕು ಉಚಿತ ಭರವಸೆ ನೀಡಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಉಚಿತ ಕೊಡುಗೆ ನೀಡೋದಾಗಿ ಹೇಳಿ ಕೈಕೊಟ್ಟಿದೆ. ಮಧ್ಯಪ್ರದೇಶದಲ್ಲಿ ಸಾಕಷ್ಟು ಭರವಸೆ ನೀಡಿತ್ತು.. ಸಾಲಮನ್ನಾ ಘೋಷಣೆ ಮಾಡಿತ್ತು.. ಈಗ ಮತ್ತೆ ಚುನಾವಣೆ ಬರುತ್ತಿದೆ.. ಆದರೆ ಮಧ್ಯಪ್ರವೇಶ ಭರವಸೆ ಭರವಸೆಗಳಾಗಿಯೇ ಉಳಿದಿವೆ ಎಂದರು.
ಇತರ ರಾಜ್ಯದಲ್ಲಿ ಭರವಸೆ ಈಡೇರಿಸದೇ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ 2 ಸಾವಿರ, 200 ಯೂನಿಟ್ ಉಚಿತ ವಿದ್ಯುತ್, ಯುವಕರಿಗೆ 2000 ಕೊಡೋದಾಗಿ ಹೇಳಿದ್ದಾರೆ. ಕರ್ನಾಟಕ ರಾಜ್ಯದ ಬಜೆಟ್ 3 ಲಕ್ಷ ಕೋಟಿ ಇದೆ. ಇವರು ಕೊಟ್ಟಿರೋ ಭರವಸೆ ಈಡೇರಿಕೆಗೆ ಒಂದು ಲಕ್ಷ ಕೋಟಿ ಬೇಕು. ಉಳಿದ ಎರಡು ಲಕ್ಷ ಕೋಟಿಯಲ್ಲಿ ಸರ್ಕಾರ ನಡೆಸಬೇಕು. ಜನರನ್ನ ಉಳಿದ ಹಣದಲ್ಲಿ ಹೇಗೆ ನಡೆಸಿಕೊಳ್ಳಲಿದೆ ಎಂದು ಊಹಿಸಿಕೊಳ್ಳಿ. ಆದರೆ ನಿಮ್ಮ ರಾಜ್ಯ ಬಜೆಟ್ 3ನೇ 1ರಷ್ಟು ಇದಕ್ಕೆ ಮೀಸಲಿಡಬೇಕು. ಇದು ಸಂಪೂರ್ಣ ಜನರನ್ನ ಮೋಸ ಮಾಡುವ ತಂತ್ರವಾಗಿದೆ. ಕರ್ನಾಟಕದ ಜನರು ಇದಕ್ಕೆ ಮರುಳಾಗಬೇಡಿ ಎಂದರು.
ಅದಾನಿ ವಿಚಾರದಲ್ಲಿ ಕಾಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ನಿರಾಧಾರ ಆರೋಪವಾಗಿದೆ. ಅದಾನಿ ವಿಚಾರದಲ್ಲಿ ಸತ್ಯಕ್ಕೆ ದೂರವಾದ ಆರೋಪ ಮಾಡಲಾಗುತ್ತಿದೆ. ಮೋದಿ ಅದಾನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಂದರೆ ರಾಜಸ್ಥಾನದ ಇಡೀ ಸೋಲಾರ್ ಪ್ರಾಜೆಕ್ಟ್ ಅದಾನಿ ಕಂಪನಿಗೆ ಕೊಡಲಾಗಿದೆ. ಅಲ್ಲಿ ಯಾರ ಸರ್ಕಾರ ಇದೆ? ಮೋದಿ ಅದಾನಿ ಭಾಯ್ ಭಾಯ್ ಅನ್ನುವವರು ರಾಜಸ್ಥಾನದಲ್ಲಿ ಯಾಕೆ ಟೆಂಡರ್ ರದ್ದು ಮಾಡಲಿಲ್ಲ. ಛತ್ತೀಸ್ಗಡದಲ್ಲಿ ಯಾಕಿಲ್ಲ, ಆರೋಪ ಮಾಡುವ ನೀವು ರಾಜಸ್ಥಾನದಲ್ಲಿ ಅದಾನಿ ಕಂಪನಿಗೆ ಕೊಟ್ಟಿರುವ ಟೆಂಡರ್ ರದ್ದು ಮಾಡಿ ಎಂದು ಸವಾಲು ಹಾಕಿದರು.
ಆಧಾರ ರಹಿತ ಆರೋಪ:ಪ್ರಧಾನಿ ಮೋದಿ ವಿರುದ್ಧ ನಿರಂತರವಾಗಿ ನಿರಾಧಾರ ಆರೋಪ ಮಾಡಲಾಗುತ್ತಿದೆ. ರಫೇಲ್ ವಿಚಾರದಲ್ಲಿ ಆಧಾರ ರಹಿತ ಆರೋಪ ಮಾಡಿ ಕೋರ್ಟ್ನಲ್ಲಿ ರಾಹುಲ್ ಗಾಂಧಿ ಕ್ಷಮಾಪಣೆ ಕೇಳಿದ್ದರು. ನಂತರ ಗಾಂಧಿ ಹತ್ಯೆ ಹಿಂದೆ ಆರ್ಎಸ್ಎಸ್ ಎಂದು ಆರೋಪಿಸಿ ಕ್ಷಮೆ ಕೇಳಿದ್ದರು. ಈಗ ಮೋದಿ ಉಪನಾಮದ ವಿಚಾರದಲ್ಲಿ ಮಾಡಿದ ಆರೋಪಕ್ಕೆ ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದಿದ್ದಾರೆ. ಈಗಲೂ ಹಿಂದೆ ಆದ ಸ್ಥಿತಿ ರಾಹುಲ್ ಗಾಂಧಿಗೆ ಬರಲಿದೆ ಎಂದರು. ಯಾತ್ರೆಗಳ ಮೂಲಕ ಬಿಜೆಪಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಎಂದಿದ್ದಾರೆ. ಆದರೆ ಭಾರತ್ ಜೋಡೋ ಯಾತ್ರೆ ಏನು. ನಿಮ್ಮದು ಪ್ರಚಾರ ಗಿಟ್ಟಿಸಿಕೊಳ್ಳುವುದು ಅಲ್ಲವೇ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕ ಸರ್ಜೇವಾಲ ಚುನಾವಣೆ ವೇಳೆ ಇಡಿ, ಐಟಿ, ಸಿಬಿಐ ಅನ್ನು ಬಿಜೆಪಿ ದುರ್ಬಳಕೆ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಒಂದು ವೇಳೆ ನಾವು ಸಿಬಿಐ ದುರ್ಬಳಕೆ ಮಾಡಿಕೊಂಡರೆ ಸುಪ್ರಿಂಕೋರ್ಟ್ಗೆ ಹೋಗಿ. ಅದಕ್ಕೆ ಅವಕಾಶ ಇದೆಯಲ್ಲ. ನೀವು ಈ ರೀತಿ ವರ್ತಿಸುತ್ತಿರುವುದು ನೋಡಿದರೆ ಅಲ್ಲಿ ಏನೋ ಆಗಿದೆ ಎಂದೇ ಅರ್ಥ ಅಲ್ಲವೇ? ಎಂದು ಟಾಂಗ್ ನೀಡಿದರು.
ರಾಜ್ಯದ ಯಾವುದೇ ಜಿಎಸ್ಟಿ ಬಾಕಿಯಿಲ್ಲ:ರಾಜ್ಯಕ್ಕೆ ಜಿಎಸ್ಟಿ ಪಾಲು ಬಾಕಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯಕ್ಕೆ ಯಾವುದೇ ಜಿಎಸ್ಟಿ ಬಾಕಿ ಇಲ್ಲ. ನಮ್ಮ ಮುಂದೆ ಕರ್ನಾಟಕದ ಜಿಎಸ್ಟಿ ಬಾಕಿ ಪ್ರಸ್ತಾಪ ಯಾವುದೂ ಇಲ್ಲ. ಎಲ್ಲ ಬಾಕಿ ಕೊಡಲಾಗಿದೆ ಎಂದರು.
ಆಧಾರ್ - ಪ್ಯಾನ್ ಲಿಂಕ್‌ಗೆ ದಂಡ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್, ದಂಡ ಹಾಕೋದನ್ನು ಸಮರ್ಥಿಸಿಕೊಂಡರು. ಮೊದಲೇ ಸಮಯ ಕೊಡಲಾಗಿತ್ತು. ಅವಕಾಶ ಇದ್ದಾಗ ಆಧಾರ್ - ಪ್ಯಾನ್ ಲಿಂಕ್ ಮಾಡಬೇಕಿತ್ತು. ಗಡುವು ಮುಗಿದ ಮೇಲೆ ದಂಡ ಹಾಕಲಾಗಿದೆ. ದಂಡ ಕಟ್ಟಿ ಲಿಂಕ್ ಮಾಡಬೇಕು. ಈಗ ಈ ಗಡುವೂ ಮುಗಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಇದು ಅನಿವಾರ್ಯ, ಕಾನೂನಾತ್ಮಕವಾಗಿಯೇ ದಂಡ ವಿಧಿಸಲಾಗಿದೆ ಎಂದರು.
ಬೆಂಗಳೂರಿಗೂ ಬಿಜೆಪಿಗೂ ಭಾವನಾತ್ಮಕ ಸಂಬಂಧ ಇದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಇಬ್ಬರು ಕೇಂದ್ರದ ನಾಯಕರು ಬೆಂಗಳೂರಿನಲ್ಲಿ ಬಂಧನ ಆಗಿದ್ದರು. ಯುಪಿಎ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿದ್ದರು. ರೈತರು ಸಂಕಷ್ಟದಲ್ಲಿದ್ದರು. ಆಗಿನ ಯುಪಿಎ ಸರ್ಕಾರಕ್ಕೆ ನಾವು ಇದರ ಬಗ್ಗೆ ಪದೇ ಪದೇ ಗಮನ ಸೆಳೆಯುತ್ತಿದ್ದೆವು. ನಾವು ಬಂದ ಮೇಲೆ ಆ ಸಮಸ್ಯೆಗಳು ಬಗೆಹರಿಯುತ್ತಿವೆ. ರಸ್ತೆ, ಹೆದ್ದಾರಿ, ರೈಲು ಸೇವೆ, ಮೂಲಸೌಕರ್ಯ, ಕೃಷಿ, ಕಾರ್ಮಿಕ ಕಲ್ಯಾಣ ನಾವು ಬಂದ ಮೇಲೆ ಆಗುತ್ತಿದೆ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಸೇರಿ ರಾಜ್ಯದಲ್ಲಿ 1 ಲಕ್ಷ ಕೋಟಿ ಮೊತ್ತದ ರಸ್ತೆ ಕಾಮಗಾರಿ ಮಾಡಲಾಗಿದೆ. 2009-14 ನಡುವೆ ರಾಜ್ಯದ ರೈಲ್ವೆ ಕಾಮಗಾರಿಗಳಿಗೆ 835 ಕೋಟಿ ಅನುದಾನ ಕೊಡಲಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಇಲ್ಲಿಯವರೆಗೆ ರೈಲ್ವೆಗೆ 7561 ಕೋಟಿ ಅನುದಾನ ಕೊಡಲಾಗಿದೆ. ಕಳೆದ ಹದಿನೈದು ದಿನಗಳ ಡೆಟಾ ತೆಗೆದು ನೋಡಿ. ಭಾರತ ಎಷ್ಟು ಡೆವಲಪ್ ಆಗಿದೆ ಅಂತ ಗೊತ್ತಾಗಲಿದೆ ಎಂದರು.
ಕರ್ನಾಟಕದ ಬಗ್ಗೆ ಮೋದಿ ವಿಶೇಷ ಕಾಳಜಿ ಹೊಂದಿದ್ದಾರೆ. 2015ರಿಂದ ಈವರೆಗೂ ಮೋದಿ 32 ಸಲ ಕರ್ನಾಟಕಕ್ಕೆ ಬಂದಿದ್ದಾರೆ ಮತ್ತೆ ಮೋದಿ ಇದೇ ತಿಂಗಳಲ್ಲಿ ಬರ್ತಾ ಇದ್ದಾರೆ. G20ನಂತಹ ದೊಡ್ಡ ಇವೆಂಟ್ ಕರ್ನಾಟಕದಲ್ಲಿ ನಡೆದಿದೆ. ವಿಶ್ವದ ಪ್ರತಿಷ್ಠಿತ ದೇಶಗಳು ಭಾಗವಹಿಸಿದವು. ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವ ಕರ್ನಾಟಕಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದಾರೆ ಎಂದರು.
ರೈಲ್ವೇ ಡಬಲಿಂಗ್ ಮತ್ತು ನಿಲ್ದಾಣದಲ್ಲಿ ದಾಖಲೆ ಆಗಿದೆ. ಸಿದ್ದಾರೂಡ ರೈಲ್ವೇ ನಿಲ್ದಾಣ 1,517 ಮೀಟರ್ ರೈಲ್ವೇ ಸ್ಟೇಷನ್ ಉದ್ಘಾಟನೆ ಆಗಿದೆ. ಇದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಆಗಿದೆ. ಮೊದಲ ಏರ್ ಕಂಡೀಷನ್ ಇರೋ ರೈಲು ನಿಲ್ದಾಣ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಲಾಗಿದೆ. 100% ವಿದ್ಯುದೀಕರಣವುಳ್ಳ ಕೊಂಕಣ ರೈಲ್ವೇ ಮಾರ್ಗ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಅತ್ಯಾಧುನಿಕ ಏರ್ಪೋರ್ಟ್ಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ 5 ಸಾವಿರ ಕೋಟಿ ವೆಚ್ಚದಲ್ಲಿ ಎರಡನೇ ರನ್ ವೇ ಮಾಡಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡನೇ ವಿಮಾನ ನಿಲ್ದಾಣ ಕೂಡ ಆರಂಭವಾಗಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಕೂಡ ಆಗಿದೆ.
ಜಯದೇವ ಆಸ್ಪತ್ರೆ ನಿರ್ಮಾಣ ಆಗಿದೆ. ತುಮಕೂರು ಟೌನ್ಶಿಪ್ ಅಡಿ ನ್ಯಾಷನ್ ಪ್ರಾಜೆಕ್ಟ್ ಕಾರಿಡಾರ್ ಮಾಡಲಾಗಿದೆ. ಚೆನ್ನೈ- ಬೆಂಗಳೂರು ಇಂಡಸ್ಟ್ರಿ ಕಾರಿಡಾರ್ ಕೂಡ ಮಾಡಲಾಗಿದೆ. ಉತ್ತಮ ರಸ್ತೆ ನಿರ್ಮಾಣ ಕೂಡ ನಡೆಯುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಗ್ಯಾಸ್ ಪೂರೈಕೆ ಕಾರ್ಯ ನಡೆಯುತ್ತಿದೆ. ಪ್ರತೀ ಸಿಲಿಂಡರ್‌ಗೆ 200 ರೂ ಸಬ್ಸಿಡಿ ನೀಡಲಾಗುತ್ತಿದೆ. ಇದು ಸಾವಿರಾರು ಕೋಟಿ ಉಳಿತಾಯ ಆಗಲಿದೆ. ತುಮಕೂರು ಇಂಡಸ್ಟ್ರೀಸ್ ಏರಿಯಾದಲ್ಲಿ ಹೆಲಿಕಾಪ್ಟರ್ ನಿರ್ಮಾಣ ಕಾರ್ಖಾನೆ ಆರಂಭಿಸಲಾಗಿದೆ. ಇದು ಮೇಕ್ ಇನ್ ಇಂಡಿಯಾ ಅಡಿ ಆರಂಭವಾಗಿರೋ ಅತಿ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕವಾಗಿದೆ ಎಂದು ಕೇಂದ್ರದ ಸಾಧನೆಗಳನ್ನು ವಿವರಿಸಿದರು.
ಸಂಕಷ್ಟದಲ್ಲಿದ್ದಾಗ ಮೋದಿಯವರು ರಾಜ್ಯಕ್ಕೆ ಬಂದಿಲ್ಲ. ಚುನಾವಣೆ ವೇಳೆ ಬರ್ತಾರೆ ಎಂಬ ಕಾಂಗ್ರೆಸ್ನವರ ಆರೋಪದಲ್ಲಿ ಹುರುಳಿಲ್ಲ. 2015 ರಿಂದ ಈವರೆಗೂ 32 ಸಲ ಬಂದಿದ್ದಾರೆ. 32 ಸಲ ರಾಜ್ಯದಲ್ಲಿ ಚುನಾವಣೆ ಬಂದಿದೆಯಾ ಹಾಗಾದರೆ..? ಆರೋಪ ಮಾಡಬೇಕು ಅಂತ ಮಾಡುತ್ತಾರೆ ಅಷ್ಟೇ ಎಂದು ಟಾಂಗ್ ನೀಡಿದರು.
ಓದಿ:ರೆಪೋದರ ಯಥಾಸ್ಥಿತಿ: ಶೇ 6.5ರಲ್ಲಿ ಮುಂದುವರಿಸಲು ಆರ್ಬಿಐ ನಿರ್ಧಾರ