ಬೆಂಗಳೂರು:ಹಿಂದಿನ ಉಪಚುನಾವಣೆಗಳ ರೀತಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಪೈಪೋಟಿ ಕಾಣುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ನವರು ಚುನಾವಣೆಯಲ್ಲಿ ಕಾಣಿಸುತ್ತಲೇ ಇಲ್ಲ. ಕಾಂಗ್ರೆಸ್ಗೆ ಬಂಡವಾಳ ಇಲ್ಲದ ಕಾರಣ, ಜೆಡಿಎಸ್ಗೆ ಅಸ್ತಿತ್ವ ಇಲ್ಲದ ಕಾರಣ ಅವರು ಅಖಾಡದಲ್ಲಿ ಕಾಣಿಸುತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯಾವಾಗಲೂ ನೆಗೆಟಿವ್ ಮಾತುಗಳ ಮೂಲಕವೇ ಚುನಾವಣೆ ಮಾಡುವುದು ಸೂಕ್ತವಲ್ಲ. ಇಂದು ಒಂದು ಕೆಜಿ ಈರುಳ್ಳಿ ಬೆಲೆ ಎಷ್ಟು? ರೈತನಿಗೆ ಸಿಗುವ ಬೆಲೆ ಎಷ್ಟು? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದೇವೇಗೌಡ, ಕುಮಾರಸ್ವಾಮಿ ಅವರಿಗೆ ಪ್ರಶ್ನಿಸುತ್ತೇನೆ. ಮೊನ್ನೆ ಎಲ್ಲಾ ರೈತರನ್ನು ಬೀದಿಗಿಳಿಸಿದ್ರಲ್ಲಾ, ಅವರನ್ನು ಬೀದಿಯಲ್ಲೇ ಬಿಡಬೇಕು ಅಂದ್ಕೊಂಡ್ರಾ? ಮೊನ್ನೆ ರೈತ ಹೋರಾಟಗಾರ ಮಾರುತಿ ಮಾನ್ಪಡೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾರಣ. ಹಳ್ಳಿಗಳಿಂದ ಇವರು ರೈತರನ್ನು ಕರೆತಂದರು ಕೆಲವು ರೈತ ಹೋರಾಟಗಾರರನ್ನು ಬಾಡಿಗೆಗೆ ಕರೆತಂದು ಪ್ರತಿಭಟನೆ ಮಾಡಿಸಿ ಕೊರೊನಾ ಹಬ್ಬಿಸಿದ್ದರು ಎಂದರು.
ವಿದ್ಯಾ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಏಕ ರೂಪ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ, ಕೌಶಲ್ಯಾಭಿವೃದ್ದಿಗೆ ಉತ್ತೇಜನ ನೀಡಲಾಗಿದೆ. 20 ಲಕ್ಷ ಕೋಟಿಯ ಆತ್ಮ ನಿರ್ಭರ್ ಯೋಜನೆಯಡಿ ಸಮಗ್ರ ಶಿಕ್ಷಣ ನೀತಿ ರೂಪಿಸಲಾಗಿದೆ. ವರ್ಗಾವಣೆ ನೀತಿ ರೂಪಿಸಿ, ಶಿಕ್ಷಣ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ಮಾಡಿದೆ. ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಲಾಗಿದೆ. ಉಪ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲಾಗಿದೆ. 5 ಸಾವಿರ ಪ್ರೌಢ ಶಾಲೆಯ ಶಿಕ್ಷಕರ ನೇಮಕಕ್ಕೆ ಸಂಪುಟ ಸಭೆ ನಿರ್ಣಯ ಮಾಡಿದೆ. ನನ್ನ ಶಾಲೆ ನನ್ನ ಕೊಡುಗೆ ಯೋಜನೆ ಜಾರಿಗೆ ತರಲಾಗಿದೆ. ಅಥಿತಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಇದರ ಆಧಾರದ ಮೇಲೆ ನಮಗೆ ಮತ ನೀಡಿ ಎಂದು ಪುಟ್ಟಣ್ಣ ಪರ ಮತ ಯಾಚನೆ ಮಾಡುತ್ತೇವೆ. ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನವರಿಗೆ ರಾಜರಾಜೇಶ್ವರಿ ನಗರದಲ್ಲಿ ಜಾತಿ ಬಿಟ್ಟು ಬೇರೆ ವಿಷಯ ಇಲ್ಲ. ಈ ಬಾರಿಯ ಚುನಾವಣೆ ಡಿ.ಕೆ. ಶಿವಕುಮಾರ್ ಜಾತಿ ರಾಜಕಾರಣಕ್ಕೂ ಇತಿಶ್ರೀ ಆಗುತ್ತದೆ. ಶಿವಕುಮಾರ್ ಭವಿಷ್ಯಕ್ಕೂ ಇತಿಶ್ರೀ ಆಗುತ್ತದೆ. ಸಮಯ ಸಾಧಕತನದ ರಾಜಕಾರಣ ಎನ್ನುವುದು ಇದಕ್ಕೇ. ಮೊನ್ನೆಯವರೆಗೆ ಡಿ.ಕೆ. ಶಿವಕುಮಾರ್ ಎಲ್ಲಾ ಪಾರ್ಟಿಯವರ ಜೊತೆ ಚೆನ್ನಾಗಿದ್ದರೂ ಯಾವಾಗ ಅಧ್ಯಕ್ಷ ಆದರೋ ಅವರಿಗೇನಾಯ್ತೋ ಗೊತ್ತಿಲ್ಲ. ಅವರ ಮನಸ್ಥಿತಿ ಮಾತ್ರ ಬದಲಾಗಿದೆ. ಈ ರೀತಿಯ ರಾಜಕಾರಣಿಗಳಿಗೆ ಇತಿಶ್ರೀ ಆಗಬೇಕು ನಮ್ಮ ಜೊತೆ ಹದಿನೇಳು ಜನ ಶಾಸಕರು ಅಲ್ಲಿರಲು ಸಾಧ್ಯವಿಲ್ಲ ಎಂದು ರಾಜೀನಾಮೆ ಕೊಟ್ಟು ಬಂದರು. ಅದು ಇವತ್ತಿನ ರಾಜನೀತಿ ಆಗಬೇಕು ಎಂದರು.