ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಷರತ್ತಿನ ಗ್ಯಾರಂಟಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಯಾವುದೇ ಷರತ್ತಿನ ಬಗ್ಗೆ ಹೇಳದೇ "ಎಲ್ಲಾ ಉಚಿತ, ಖಚಿತ ಹಾಗು ನಿಶ್ಚಿತ" ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ ಎಂದು ಕಿಡಿ ಕಾರಿದ್ದಾರೆ.
ಈ ಸಂಬಂಧ ಸಾರ್ವಜನಿಕರಲ್ಲಿ ಕೆಲ ಮನವಿಗಳನ್ನು ಮಾಡಿದ್ದಾರೆ. ಯಾರು ಹೆಚ್ಚಾದ ಕರೆಂಟ್ ಬಿಲ್ ಪಾವತಿ ಮಾಡಬೇಡಿ, 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಿನಮ್ರತೆಯಿಂದ ವಾಪಸ್ ಕಳುಹಿಸಿ ಎಂದು ಕರೆ ನೀಡಿದ್ದಾರೆ. ಮಹಿಳೆಯರು ಎಲ್ಲ ಬಸ್ಗಳಲ್ಲೂ ಟಿಕೆಟ್ ತೆಗೆದುಕೊಳ್ಳಬೇಡಿ, ಕಂಡೆಕ್ಟರ್ ಹಾಗೂ ಸಿಬ್ಬಂದಿಗೆ ಸಿದ್ದರಾಮಯ್ಯರನ್ನು ಕೇಳಿ ಎಂದು ಹೇಳಿ. ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಿ. 2000 ರೂ ಪಡೆಯಲು ಎಲ್ಲ ಮಹಿಳೆಯರು ನೋಂದಾಯಿಸಿ ಎಂದು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಜನಾಂದೋಲನ ಆಗಬೇಕಿದೆ, ಕೊಟ್ಟ ಮಾತನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಬೇಕು. ಮಹದೇವಪ್ಪನಿಗೂ ಕೊಡಬೇಕು, ಕಾಕ ಪಾಟೀಲನಿಗೂ ಕೊಡಬೇಕು, ಎಲ್ಲರಿಗೂ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಎಲ್ಲ ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕಾರ್ಯಗಳನ್ನು ಮಾಡಿದ್ದವು. ಬಿಜೆಪಿ ಪಕ್ಷ ಕೇಂದ್ರದ ನಾಯಕರನ್ನು ಕರೆಸಿ ಅದ್ಧೂರಿಯಾಗಿ ರೋಡ್ ಶೋಗಳು, ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾರರನ್ನು ಆಕರ್ಷಿಸುವ ಕಾರ್ಯ ಮಾಡಿತ್ತು.