ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆವರೆಗೆ ಮಾತ್ರ ಗ್ಯಾರಂಟಿಗಳ ಆಯುಷ್ಯ: ವಿಜಯೇಂದ್ರ ಭವಿಷ್ಯ - BJP state President

ಲೋಕಸಭೆ ಚುನಾವಣೆವರೆಗೆ ಮಾತ್ರ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳು ಇರಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ

-bjp-state-president-vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

By ETV Bharat Karnataka Team

Published : Jan 9, 2024, 6:21 PM IST

ಬೆಂಗಳೂರು :ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಭರದಿಂದ ಸರ್ಕಾರ ತತ್ತರಿಸಿದ್ದು, ಇನ್ನು ಕೆಲ ದಿನಗಳವರೆಗೆ ಮಾತ್ರ ಗ್ಯಾರಂಟಿಗಳು ಇರಲಿವೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರದ ಗ್ಯಾರಂಟಿಗಳೂ ಮುಗಿಯಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಕಾರ್ಯಾಗಾರ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಾರ್ಯಾಗಾರವನ್ನು ಉದ್ಘಾಟಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮ ಪ್ರಕೋಷ್ಠದ ಜವಾಬ್ದಾರಿ ಅತ್ಯಂತ ಮಹತ್ವದ್ದು. ಚುನಾವಣಾ ಸಂದರ್ಭ ಮಾಧ್ಯಮ ಪ್ರಕೋಷ್ಠ ಯಾವ ರೀತಿ ಕೆಲಸ ಮಾಡಬೇಕು ಎನ್ನುವ ಕುರಿತು ವಿವರಣೆ ನೀಡಿದರು.

ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳಿಗೆ ಕೇವಲ ಅಲ್ಪಾಯುಷ್ಯವಿದೆ. ಉಚಿತ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳಿಂದ ಆರ್ಥಿಕವಾಗಿ ಬೊಕ್ಕಸಕ್ಕೆ ಹೊರೆಯಾಗಲಿದೆ. ಆರ್ಥಿಕ ಅಶಿಸ್ತಿಗೂ ಇದು ಕಾರಣವಾಗಲಿದೆ. ಇದೆಲ್ಲವೂ ಸಿಎಂ ಸಿದ್ದರಾಮಯ್ಯ ಅವರಿಗೆ‌ ಗೊತ್ತಿದೆ. ಆದರೂ ಅಧಿಕಾರಕ್ಕಾಗಿ ಉಚಿತ ಯೋಜನೆ ಘೋಷಿಸಿದ್ದಾರೆ ಎಂದು ಟೀಕಿಸಿದರು.

ಈಗಾಗಲೇ ಆರ್ಥಿಕ ಸಂಕಷ್ಟ ಎದುರಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗಿದೆ. ಸರ್ಕಾರ ರಚನೆಯಾದ ನಂತರ ಇಲ್ಲಿಯವರೆಗೆ ಒಂದೇ ಒಂದು ಹೊಸ ಅಭಿವೃದ್ಧಿ ಕಾರ್ಯಕ್ರಮ ಅಥವಾ ಯೋಜನೆ ಜಾರಿಗೆ‌ ತರಲಾಗಿಲ್ಲ. ಅಭಿವೃದ್ಧಿ ಕೆಲಸ ಸ್ಥಗಿತಗೊಂಡಿದ್ದು, ಕ್ಷೇತ್ರಕ್ಕೆ ಅನುದಾನವಿಲ್ಲ ಎಂಬ ಕಾರಣಕ್ಕೆ ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ಗಿಮಿಕ್ ಎನ್ನುವುದನ್ನು ರಾಜ್ಯದ ಜನತೆ ಈಗಾಗಲೇ ಚೆನ್ನಾಗಿಯೇ ಅರಿತಿದ್ದಾರೆ ಎಂದರು.

ಕಾಂಗ್ರೆಸ್​ನ ಐದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ವಿರೋಧಿಸುವುದಿಲ್ಲ. ಗ್ಯಾರಂಟಿಗಳ ನಿಲ್ಲಿಸಲು ಒತ್ತಾಯಿಸುತ್ತಿಲ್ಲ. ಆದರೆ ಲೋಕಸಭೆ ಸಮರದ ಬಳಿಕ ಕಾಂಗ್ರೆಸ್ ಸರ್ಕಾರವೇ ಐದು‌ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಿದೆ. ಮುಖ್ಯಮಂತ್ರಿಗಳ ನೂತನ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಿಎಂ ಇಂಗಿತವನ್ನೇ ಹೊರ ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿಗಳನ್ನು ನಿಲ್ಲಿಸುವುದಕ್ಕೆ ಇದು ಪೀಠಿಕೆಯಾಗಿದೆ ಎಂದು ವಿಶ್ಲೇಷಣೆ ಮಾಡಿದರು.

ಕಾರ್ಯಾಗಾರದಲ್ಲಿ ರಾಷ್ಟ್ರೀಯ ವಕ್ತಾರರಾದ ಸೈಯದ್ ಜಫರ್ ಇಸ್ಲಾಂ, ತೂಹಿನ್ ಸಿನ್ಹಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು. ರಾಜ್ಯ ವಕ್ತಾರರು, ಪಕ್ಷದ ಮುಖಂಡರು ಮತ್ತು ಅಪೇಕ್ಷಿತರು ಭಾಗವಹಿಸಿದ್ದರು.

ಇದನ್ನೂ ಓದಿ :ಬಿಡುಗಡೆಯಾಗದ ಬರ ಪರಿಹಾರದ ಹಣ: ರಾಜಭವನದ ಕದ ತಟ್ಟಿದ ಬಿಜೆಪಿ

ABOUT THE AUTHOR

...view details