ಬೆಂಗಳೂರು: ಗ್ಯಾರಂಟಿಗಳ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ರೇಸ್ ಕೋರ್ಸ್ನ ಶಕ್ತಿ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಂದ ಖರ್ಚು, ವೆಚ್ಚ, ರೂಪುರೇಷೆ, ಅಂಕಿಅಂಶದ ಕುರಿತು ಅವರು ಮಾಹಿತಿ ಪಡೆದರು. ಹಣಕಾಸು ಇಲಾಖೆ ಇಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ಕ್ರೋಢೀಕರಣ ಹೇಗೆ ಎಂಬ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದೆ.
ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರರಿಗೆ 3,000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂಪಾಯಿ ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ 10 ಕೆ.ಜಿ ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ಈಗಾಗಲೇ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಆದೇಶಿಸಲಾಗಿದೆ.
ಈ ಬಗ್ಗೆ ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಸದ್ಯ ವಾರ್ಷಿಕ 50,000 ಕೋಟಿ ರೂ. ಗ್ಯಾರಂಟಿಗಳಿಗಾಗಿ ಹಣ ಬೇಕಾಗಿದೆ. ಈ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬುಧವಾರ ಎಲ್ಲ ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನವಾಗಲಿದೆ ಎಂದು ತಿಳಿದುಬಂದಿದೆ.
ಗೃಹ ಜ್ಯೋತಿಗೆ ₹12,038 ಕೋಟಿ ಹೊರೆ:ಪ್ರಮುಖವಾಗಿ ಸಭೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ವಿಸ್ತೃತವಾಗಿ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು. ಅಧಿಕಾರಿಗಳು ನೀಡಿದ ಅಂಕಿಅಂಶದಂತೆ 200 ಯೂನಿಟ್ ಫ್ರೀ ವಿದ್ಯುತ್ ಯೋಜನೆಯಿಂದ ಅಂದಾಜು 2.14 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ ವಾರ್ಷಿಕ ಬಳಕೆ ಅಂದಾಜು 13,575 ಮಿಲಿಯನ್ ಯೂನಿಟ್ ಆಗಲಿದೆ. ನಿಗದಿತ ಶುಲ್ಕ , ತೆರಿಗೆ ಇತ್ಯಾದಿಗಳನ್ನು ಸೇರಿದಂತೆ ಯೋಜನೆಗಾಗಿ ಅಗತ್ಯವಿರುವ ಒಟ್ಟು ಬಿಲ್ಗಳು ವಾರ್ಷಿಕ 12,038 ಕೋಟಿ ರೂ. ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನು ಬಿಪಿಎಲ್ ಕುಟುಂಬಕ್ಕೆ ಅನ್ವಯಿಸುವ ಬಗ್ಗೆನೂ ಚರ್ಚೆ ನಡೆದಿದೆ. ಆದರೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ 32,000 ಕೋಟಿ:ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ನೀಡುವ ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್ನ ಮತ್ತೊಂದು ಗ್ಯಾರಂಟಿ ಸ್ಕೀಂ. ಇಂದು ನಡೆದ ಸಭೆಯಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳು ಗೃಹ ಲಕ್ಷ್ಮಿ ಯೋಜನೆಗೆ ವಾರ್ಷಿಕ ಅಂದಾಜು 32,000 ಕೋಟಿ ರೂ. ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಯನ್ನು ಎಲ್ಲರಿಗೂ ಅನ್ವಯಿಸಿದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ. ಹಾಗಾಗಿ ಬಿಪಿಎಲ್ ಕುಟುಂಬದ ಮನೆಯೊಡತಿಗೆ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡುವ ಬಗ್ಗೆನೂ ಚರ್ಚೆ ನಡೆಸಲಾಗಿದೆ. ಕೆಲ ಷರತ್ತು ಹಾಕಿ ಯೋಜನೆ ಜಾರಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.